ಐರ್ಲೆಂಡ್, ಅ.31 (DaijiworldNews/PY): ಮೈಸೂರು ಮೂಲದ ಮಹಿಳೆ ಹಾಗೂ ಇಬ್ಬರು ಮಕ್ಕಳು ಐರ್ಲೆಂಡ್ನ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ನಲ್ಲಿರುವ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಸೀಮಾ ಬಾನು ಸೈಯದ್ (37), ಮಗಳು ಅಫ್ರಿಯಾ (11) ಹಾಗೂ ಮಗ ಫಜಾನ್ (6) ಎಂದು ಗುರುತಿಸಲಾಗಿದೆ.
ಸ್ಥಳೀಯ ಪೊಲೀಸರ ಪ್ರಕಾರ ಅವರ ಮನೆಯಲ್ಲಿ ಅವರನ್ನು ಕತ್ತುಹಿಸುಕಿ ಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ.
ಹಲವು ವರ್ಷಗಳ ಹಿಂದೆ ಸೀಮಾ ಬಾನು ಕುಟುಂಬವು ಐರ್ಲೆಂಡ್ಗೆ ಆಗಮಿಸಿದ್ದರು. ಸೀಮಾ ಅವರ ಪತಿ ಸಮೀರ್ ಸೈಯದ್ ಅವರು ಪಟ್ಟಣದಿಂದ ಹೊರಗಿದ್ದು, ಘಟನೆಯ ಬಗ್ಗೆ ಅವರಿಗೆ ತಿಳಿಸಲಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.
ಮೂಲತಃ ಕರ್ನಾಟಕದ ಮೈಸೂರು ಮೂಲದವರಾದ ಇವರು ಸಮೀರ್ ಅವರಿಗೆ ಅಲ್ಲಿ ಕೆಲಸ ದೊರೆತ ನಂತರ ಈ ವರ್ಷದ ಫೆಬ್ರವರಿಯಲ್ಲಿ ದುಬೈನಿಂದ ಐರ್ಲೆಂಡ್ಗೆ ತೆರಳಿದ್ದರು.
ಮರಣೋತ್ತರ ಪರೀಕ್ಷೆಯ ಬಳಿಕ ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಐರ್ಲೆಂಡ್ನ ಡಂಡ್ರಮ್ ಗಾರ್ಡಾ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಬ್ಬರು ಮಕ್ಕಳು ಒಂದು ಕೋಣೆಯಲ್ಲಿ, ತಾಯಿಯ ಶವ ಇನ್ನೊಂದು ಕೋಣೆಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಸೀಮಾ ಬಾನು ಅವರು ಹೇಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಬೇಕಿದೆ.
ಈ ವರ್ಷದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ಹಲ್ಲೆ ನಡೆದಿದ್ದು, ಇವರ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯನ್ನು ಮುಂದಿನ ವರ್ಷದ ಎಪ್ರಿಲ್ನಲ್ಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದು, ವಿಚಾರಣೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಐರ್ಲೆಂಡ್ನ ಭಾರತೀಯ ರಾಯಭಾರ ಕಚೇರಿಯೂ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದೆ.
ಸೀಮಾ ಅವರ ಕುಟುಂಬವು ಐರ್ಲೆಂಡ್ನ ಭಾರತೀಯ ರಾಯಭಾರ ಕಚೇರಿ ಮತ್ತು ಐರಿಶ್ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಶವಗಳನ್ನು ವಾಪಸ್ ಕಳುಹಿಸಲು ಸಹಾಯ ಮಾಡುವಂತೆ ಕೋರಿದೆ.