ಲಾಹೋರ್, ನ. 02 (DaijiworldNews/MB) : ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡದಿದ್ದರೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಬಹುದು ಎಂಬ ಭೀತಿಯಿಂದ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಾಗಿತ್ತು ಎಂಬ ಹೇಳಿಕೆ ನೀಡಿದ್ದ ಪ್ರತಿಪಕ್ಷದ ಹಿರಿಯ ಮುಖಂಡನ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಲು ಪಾಕ್ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಸಂಸತ್ತಿನಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಪಾಕಿಸ್ತಾನ ಮುಸ್ಲೀಂ ಲೀಗ್ - ನವಾಜ್ (ಪಿಎಂಎಲ್-ಎನ್) ನಾಯಕ ಸರ್ದಾರ್ ಅಯಾಝ್ ಸಾದಿಕ್, ''ವರ್ಧಮಾನ್ ಅವರನ್ನು ವಶಕ್ಕೆ ಪಡೆದ ನಂತರ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಶಾ ಮಹಮೂದ್ ಖುರೇಷಿ ಸಭೆಯಲ್ಲಿದ್ದು, ಇಮ್ರಾನ್ ಖಾನ್ ಹಾಜರಾಗಲು ನಿರಾಕರಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಕೋಣೆಗೆ ಬಂದಿದ್ದರು. ಅವರ ಕಾಲುಗಳು ನಡುಗುತ್ತಿದ್ದವು, ಬೆವರುತ್ತಿದ್ದರು. ಆಗ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ನಾವು ಅಭಿನಂದನ್ ವರ್ಧಮಾನ್ರನ್ನು ಬಿಡುಗಡೆ ಮಾಡದೆ ಇದ್ದರೆ ಪಾಕಿಸ್ತಾನದ ಮೇಲೆ ರಾತ್ರಿ 9 ಗಂಟೆಗೆ ಭಾರತವು ದಾಳಿ ನಡೆಸಲಿದೆ, ಅವರನ್ನು ಬಿಟ್ಟು ಬಿಡಿ ಎಂದಿದ್ದರು'' ಎಂಬುದಾಗಿ ಹೇಳಿದ್ದರು.
ಈ ಹೇಳಿಕೆಯ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಒಳಾಡಳಿತ ಸಚಿವ ಇಜಾಜ್ ಶಾ, ''ಸಾದಿಕ್ ವಿರುದ್ದವಾಗಿ ಹಲವು ದೂರುಗಳಿದ್ದು, ಈ ನಿಟ್ಟಿನಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ'' ಎಂದು ತಿಳಿಸಿದರು.