ಕಠ್ಮಂಡು, ನ.02 (DaijiworldNews/HR): ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮತ್ತು ಅವರ ವಿರೋಧಿ ಪುಷ್ಪ ಕಮಾಲ್ ದಹಾಲ್ ಪ್ರಚಂಡ ಅವರ ನಡುವಿನ ಮಾತುಕತೆ ನಂತರ ಆಡಳಿತ ಪಕ್ಷ ವಿಭಜಿಸುವ ಬಗ್ಗೆ ಪ್ರಧಾನಿ ಸುಳಿವು ನೀಡಿರುವುದಾಗಿ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಓಲಿಯವರು ಪಕ್ಷಾಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪ್ರಚಂಡ ಹಾಗೂ ಮತ್ತೊಬ್ಬ ಹಿರಿಯ ಮುಖಂಡ ಮಾಧವ್ ಕುಮಾರ್ ನೇಪಾಳ ಅವರು ಆಗ್ರಹಿಸಿದ್ದರು, ಬಳಿಕ ಭಿನ್ನಮತೀಯ ನಾಯಕರು ಸರ್ಕಾರವನ್ನು ಉರುಳಿಸುವ ಸಂಚು ಮಾಡಿದ್ದಾರೆ ಎಂದು ಪ್ರಧಾನಿ ಆರೋಪಿಸಿದ್ದರು.
ಇದೀಗ ಪಕ್ಷದ ಕಾರ್ಯಾಧ್ಯಕ್ಷ ಪ್ರಚಂಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಪಕ್ಷ ಪಡೆಯುವ ಸುಳಿವನ್ನು ಓಲಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪಕ್ಷದ ಸೆಂಟ್ರಲ್ ಸೆಕ್ರೇಟ್ರಿಯೇಟ್ ಸಭೆ ಕರೆಯುವಂತೆ ಪ್ರಚಂಡ ಮಾಡಿಕೊಂಡ ಮನವಿಯನ್ನೂ ಪ್ರಧಾನಿ ಓಲಿ ತಳ್ಳಿಹಾಕಿದ್ದಾರೆ ಎಂದು ವರದಿಯಾಗಿದೆ.