ಯುಎಇ, ನ. 04 (DaijiworldNews/MB) : ಸಂಯುಕ್ತ ಅರಬ್ ರಾಷ್ಟ್ರದ ಪ್ರಧಾನಿ ಮತ್ತು ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮಂಗಳವಾರ ಚೀನಾದ ಔಷಧೀಯ ಕಂಪನಿ ಸಿನೋಫಾರ್ಮ್ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರಧಾನಿ ಶೇಖ್ ಮೊಹಮ್ಮದ್ ಅವರು ಲಸಿಕೆ ಹಾಕಿಸಿಕೊಳ್ಳುವ ಫೋಟೋದೊಂದಿಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
"ಇಂದು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳುವಾಗಿನ ಪೋಟೋ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಉತ್ತಮ ಆರೋಗ್ಯವನ್ನು ನಾವು ಬಯಸುತ್ತೇವೆ. ಯುಎಇಯಲ್ಲಿ ಲಸಿಕೆ ಲಭ್ಯವಾಗುವಂತೆ ಪಟ್ಟುಬಿಡದೆ ಶ್ರಮಿಸಿದ ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆಯಿದೆ. ಯುಎಇಯಲ್ಲಿ ಎಂದಿಗೂ ಭವಿಷ್ಯ ಉತ್ತಮವಾಗಿರುತ್ತದೆ" ಎಂದು ಅವರು ಟ್ವೀಟಿಸಿದ್ದಾರೆ.
ಸಿನೋಫಾರ್ಮ್ ಅಭಿವೃದ್ಧಿಪಡಿಸಿದ ಲಸಿಕೆ ಪಡೆದ ಇತ್ತೀಚಿನ ಅರಬ್ ನಾಗರಿಕ ಅಧಿಕಾರಿ ಶೇಖ್ ಮೊಹಮ್ಮದ್ ಎಂದು ಮಾಧ್ಯಮ ವರದಿ ಮಾಡಿದೆ. ಈಗಾಗಲೇ ಹಲವು ಅರಬ್ ನಾಗರಿಕ ಅಧಿಕಾರಿಗಳು ಈ ಲಸಿಕೆ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 16 ರಂದು ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಲಸಿಕೆ ಹಾಕಿಸಿಕೊಂಡಿದ್ದರು. ಬಳಿಕ ಯುಎಇ ಸಂಸತ್ತು ವ್ಯವಹಾರಗಳ ಸಚಿವ ಮೊಹಮ್ಮದ್ ಅಬ್ದುಲ್ಲಾ ಅಲ್-ಗೆರ್ಗಾವಿ ಕೂಡಾ ಲಸಿಕೆ ಹಾಕಿಸಿಕೊಂಡಿದ್ದರು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಯುಎಇಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ನೀಡಲಾಗಿದೆ.
ಅಬುಧಾಬಿಯಲ್ಲಿ ಯಶಸ್ವಿ ಕ್ಲಿನಿಕಲ್ ಪ್ರಯೋಗಗಳ ನಂತರ ಕೊರೊನಾ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಈ ಕೊರೊನಾ ಲಸಿಕೆ ಬಳಕೆಗೆ ಯುಎಇ ಅನುಮೋದನೆ ನೀಡಿತ್ತು.
ಚೀನಾ ಮೂಲದ ಸಿನೋಫಾರ್ಮ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಚೀನಾದಲ್ಲಿ ಈ ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಯುಎಇಯ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಯುಎಇಯಲ್ಲಿ ಕಂಪನಿಯು ಒಪ್ಪಂದ ಮಾಡಿಕೊಂಡಿದ್ದು ಮೂರನೇ ಹಂತದ ಪ್ರಯೋಗಕ್ಕೆ ಯುಎಇಯನ್ನು ಆಯ್ಕೆ ಮಾಡಲಾಗಿದೆ.