ನ್ಯೂಯಾರ್ಕ್, ನ. 13 (DaijiworldNews/MB) : ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ''ಎ ಪ್ರಾಮಿಸ್ಡ್ ಲ್ಯಾಂಡ್'' ಎಂಬ ಹೊಸ ಪುಸ್ತಕದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಉಲ್ಲೇಖ ಮಾಡಿದ್ದು ರಾಹುಲ್ ಗಾಂಧಿ ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ ಎಂದಿದ್ದಾರೆ. ಇದೇ ವೇಳೆ ರಾಹುಲ್ ಅವರ ತಾಯಿ ಸೋನಿಯಾ ಗಾಂಧಿಯವರ ಬಗ್ಗೆ ರಾಜಕೀಯವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿಯವರನ್ನು ಬರಾಕ್ ಒಬಾಮಾ ತಮ್ಮ ಪುಸ್ತಕದಲ್ಲಿ ಲೇವಡಿ ಮಾಡಿರುವ ಭಾಗವು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
"ರಾಹುಲ್ ಗಾಂಧಿ ಅವರು ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ. ಅವರು ಅಭ್ಯಾಸ ಮಾಡುವ ವಿದ್ಯಾರ್ಥಿಯಂತೆ ಇದ್ದಾರೆ. ಹಾಗೆಯೇ ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕರಾಗಿರುವ ವಿದ್ಯಾರ್ಥಿಯಂತೆ ಇದ್ದಾರೆ. ಆದರೆ ಆಳಕ್ಕೆ ಇಳಿದರೆ ಅವರಿಗೆ ವಿಷಯವನ್ನು ಕರಗತ ಮಾಡಿಕೊಳ್ಳುವ ಉತ್ಸಾಹ ಅಥವಾ ಒಲವು ಇಲ್ಲ'' ಎಂದು ಒಬಾಮಾ ವಿಮರ್ಶಿಸಿದ್ದಾರೆ.
ವಿಮರ್ಶಕ ಚಿಮಾಮಂಡಾ ಎನ್ಗೊಜಿ ಅಡಿಚಿ, ಚಾರ್ಲಿ ಕ್ರಿಸ್ಟ್ ಮತ್ತು ರಹಮ್ ಎಮ್ಯುನೆಲ್ನಂಥ ವ್ಯಕ್ತಿಗಳ ಸೌಂದರ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಸೋನಿಯಾ ಗಾಂಧಿಯವರ ಉಲ್ಲೇಖದಂತಹ ಒಂದು ಎರಡು ನಿದರ್ಶನಗಳನ್ನು ಹೊರತುಪಡಿಸಿ ಮಹಿಳೆಯರ ಸೌಂದರ್ಯದ ಬಗ್ಗೆ ಉಲ್ಲೇಖವಿಲ್ಲ ಎಂದು ಬರೆದಿದ್ದಾರೆ.
ಅಮೇರಿಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿರ್ಭಯದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ವಿಮರ್ಶೆ ತಿಳಿಸಿದೆ.
ಒಬಾಮಾ ಅವರ ಈ ಪುಸ್ತಕದಲ್ಲಿ ಆರಂಭಿಕ ರಾಜಕೀಯ, 2008 ರ ನವೆಂಬರ್ 4 ರಲ್ಲಿ ಅವರು ಅಮೇರಿಕಾದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಆಫ್ರಿಕನ್ ಅಮೇರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪ್ರಯಾಣದ ಬಗ್ಗೆ ವಿವರಿಸಲಾಗಿದೆ. ಈ ಪುಸ್ತಕ ನವೆಂಬರ್ 17 ರಂದು ಬಿಡುಗಡೆಯಾಗಲಿದೆ.