ನ್ಯೂಯಾರ್ಕ್, ನ.14 (DaijiworldNews/PY): ದೀಪಾವಳಿ ಹಬ್ಬದ ಪ್ರಯುಕ್ತ ನ್ಯೂಯಾರ್ಕ್ನ ಎಂಪೈರ್ ಕಟ್ಟಡವನ್ನು ಕಿತ್ತಳೆ ಬಣ್ಣದ ದೀಪಗಳಿಂದ ಬೆಳಗಿಸಲಾಗಿದೆ.
ದಿ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್, ನ್ಯೂಜರ್ಸಿ, ಕೆನೆಕ್ಟಿಕಟ್ ಹಾಗೂ ಎಂಪೈರ್ಸ್ಟೇಟ್ ಕಟ್ಟಡದ ಸಹಯೋಗದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಎಂಪೈರ್ ಕಟ್ಟಡವನ್ನು ಕಿತ್ತಳೆ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಂಪೈರ್ ಕಟ್ಟಡದವರು, "ದಿ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಕಟ್ಟಡವನ್ನು ಕಿತ್ತಳೆ ಬಣ್ಣಗಳಿಂದ ಬೆಳಗಿಸುವ ಮುಖೇನ ನಾವು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ" ಎಂದಿದ್ದಾರೆ.
"ಭಾರತದ ಸಂಪ್ರದಾಯ, ಆಚರಣೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ದೀಪಾವಳಿ ಸೂಪ್ ಹಾಗೂ ಕಿಚನ್ ಅಭಿಯಾನದಡಿ ನ್ಯೂಜರ್ಸಿ, ನ್ಯೂಯಾರ್ಕ್, ಕನೆಕ್ಟಿಕಟ್ನಲ್ಲಿ 10,000 ಮಂದಿಗೆ ಊಟದ ವ್ಯವಸ್ಥೆ ಕೈಗೊಂಡಿದ್ದೇವೆ" ಎಂದು ಎಫ್ಐಎ ಹೇಳಿದೆ.
ಈ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ನ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.