ನ್ಯೂಯಾರ್ಕ್, ನ. 16 (DaijiworldNews/MB) : ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಸೋಲನ್ನು ಅನುಭವಿಸಿದ್ದೇನೆ ಎಂದು ಕೊನೆಗೂ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೆ ಡೆಮೋಕ್ರೆಟಿಕ್ ಪಕ್ಷದವರು ತಾವು ಗೆಲುವು ಸಾಧಿಸಲು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಟ್ರಂಪ್, ''ಚುನಾವಣೆಯು ಕಠಿಣವಾಗಿದ್ದರಿಂದ ಜೋ ಬಿಡೆನ್ ಗೆದ್ದರು'' ಎಂದು ಹೇಳಿದ್ದಾರೆ.
ನವೆಂಬರ್ 3 ರಂದು ನಡೆದ ಚುನಾವಣೆಯ ಫಲಿತಾಂಶದಲ್ಲಿ ತಾನು ಸೋತು ಬಿಡೆನ್ ಗೆಲುವು ಸಾಧಿಸಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿರಲಿಲ್ಲ. ಎಲ್ಲಾ ಫಲಿತಾಂಶಗಳು ಇನ್ನೂ ಹೊರಬಿದ್ದಿಲ್ಲ. ಅಧಿಕೃತ ಮಾಧ್ಯಮ ಘೋಷನೆಯೂ ಆಗಿಲ್ಲ ಎಂಬುದು ಅವರ ವಾದವಾಗಿದೆ.
ಶುಕ್ರವಾರ ಮಾಧ್ಯಮ ಮಾಡಿದ ವರದಿಯ ಪ್ರಕಾರ, ಬಿಡೆನ್ಗೆ 306 ಹಾಗೂ ಟ್ರಂಪ್ಗೆ 232 ಮತಗಳು ಲಭಿಸಿದೆ. ಗೆಲುವು ಸಾಧಿಸಲು 270 ಚುನಾವಣಾ ಮತಗಳ ಅಗತ್ಯವಿದೆ. ಬಿಡೆನ್ ಈಗಾಗಲೇ 270 ಮತಗಳನ್ನು ದಾಟಿ 306 ಮತಗಳನ್ನು ಪಡೆದಿದ್ದಾರೆ. ಆದರೆ ಸೋಲನ್ನು ಒಪ್ಪಿಕೊಂಡಿರದ ಟ್ರಂಪ್, ''ಸರಿಯಾಗಿ ಮತ ಎಣಿಕೆ ನಡೆದರೆ ನಾನೇ ಮತ್ತೆ ಅಧ್ಯಕ್ಷನಾಗುತ್ತೇನೆ'' ಎಂದು ಹೇಳಿದ್ದರು. ಇದೀಗ ಭಾನುವಾರ ತನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ''ಚುನಾವಣೆಯು ಕಠಿಣವಾಗಿದ್ದರಿಂದ ಅವರು ಗೆದ್ದರು. ಆದರೆ ಅವರು ವಂಚಿಸಿದ್ದಾರೆ'' ಎಂದು ಹೇಳಿದ್ದಾರೆ.
ಇನ್ನು ಮತ್ತೊಂದು ಟ್ವೀಟ್ನಲ್ಲಿ, ''ಚುನಾವಣೆಯ ರಾತ್ರಿಯಲ್ಲಿ ನಡೆದ ಎಲ್ಲಾ ಯಾಂತ್ರಿಕ ತೊಂದರೆಗಳು ನಿಜವಾಗಿಯೂ ಮತಗಳನ್ನು ಕದಿಯುವ ಪ್ರಯತ್ನವಾಗಿದೆ. ಅವರು ಸಿಕ್ಕಿಹಾಕಿಕೊಳ್ಳದೆ ಸಾಕಷ್ಟು ಯಶಸ್ವಿಯಾದರು'' ಎಂದು ಆರೋಪಿಸಿದ್ದಾರೆ.
ಇನ್ನು ಬಿಡೆನ್ "ನಾನು ಅಧ್ಯಕ್ಷನಾಗಿ ಚುನಾಯಿತನಾಗಿದ್ದೇನೆ" ಎಂದು ಶುಕ್ರವಾರ ಘೋಷಿಸಿದ್ದು ಈ ಸಂದರ್ಭದಲ್ಲೇ ಕೊರೊನಾ ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ತಿಳಿಸಿದ್ದರು.