ಜಿನೇವಾ, ನ. 17 (DaijiworldNews/MB) : ''ಕೊರೊನಾ ಸೋಂಕು ಹರಡುವಿಕೆ ತಡೆಯಲು ಬರೀ ಲಸಿಕೆ ಸಾಲದು'' ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ.
''ಲಸಿಕೆಯೊಂದರಿಂದಲ್ಲೇ ಕೊರೊನಾ ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಪ್ರಸ್ತುತ ಕೊರೊನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳೊಂದಿಗೆ ಕೊರೊನಾ ಸೋಂಕು ಲಸಿಕೆ ಒಂದು ಪೂರಕವಾಗಬಹುದೇ ಹೊರತಾಗಿ ಅದು ಒಂದು ಪರ್ಯಾಯ ಕ್ರಮವಾಗಲಾರದು'' ಎಂದು ತಿಳಿಸಿದ್ದಾರೆ.
''ಆರೋಗ್ಯ ಕಾರ್ಯಕರ್ತರು, ವಯಸ್ಸಾದವರು ಮತ್ತು ಹೆಚ್ಚು ಅಪಾಯದಲ್ಲಿ ಇರುವವರಿಗೆ ಮೊದಲನೇಯದಾಗಿ ಕೊರೊನಾ ಲಸಿಕೆ ನೀಡಲಾಗುತ್ತದೆ. ಆದರೆ ಇದರಿಂದಾಗಿ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗಬಹುದು ಸೋಂಕಿನ ಪ್ರಮಾಣವಲ್ಲ. ಸೋಂಕು ತಡೆಗಟ್ಟಬೇಕಾದರೆ ಈ ಹಿಂದೆ ಪಾಲಿಸುತ್ತಿರುವ ಸಾಮಾಜಿಕ ಅಂತರದಂತಹ ಕ್ರಮಗಳನ್ನು ಪಾಲಿಸಬೇಕು'' ಎಂದು ತಿಳಿಸಿದ್ದಾರೆ.
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಈವರೆಗೂ 5 ಕೋಟಿಗೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದೆ. ಹಾಗೆಯೇ 13 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.