ವಾಷಿಂಗ್ಟನ್, ನ. 17 (DaijiworldNews/MB) : ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಸೋಲನ್ನು ಅನುಭವಿಸಿದ್ದೇನೆ ಎಂದು ಕೊನೆಗೂ ಒಪ್ಪಿಕೊಂಡಿದ್ದ ಡೊನಾಲ್ಡ್ ಟ್ರಂಪ್ ಈಗ ಮತ್ತೆ ತಾನು ಸೋತಿರುವುದಾಗಿ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ''ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ!'' ಎಂದು ಹೇಳಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ವಿರುದ್ದ ಈ ಹಿಂದೆ ಸೋಲನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದ ಟ್ರಂಪ್ ಭಾನುವಾರ ಟ್ವೀಟ್ ಮಾಡಿ, ''ಚುನಾವಣೆಯು ಕಠಿಣವಾಗಿದ್ದರಿಂದ ಅವರು( ಜೋ ಬಿಡೆನ್) ಗೆದ್ದರು. ಆದರೆ ಅವರು ವಂಚಿಸಿದ್ದಾರೆ'' ಎಂದು ಹೇಳಿದ್ದರು. ಸೋಮವಾರ ಮತ್ತೆ ತನ್ನ ಸೋಲನ್ನು ಒಪ್ಪಿಕೊಳ್ಳದ ಟ್ರಂಪ್, ''ನಾನು ಚುನಾವಣೆ ಗೆದ್ದಿದ್ದೇನೆ!'' ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಟ್ವೀಟರ್, ''ಅಧಿಕೃತ ಮೂಲಗಳು ಚುನಾವಣೆ ಬಗ್ಗೆ ಬೇರೆಯೇ ಮಾಹಿತಿ ನೀಡಿವೆ'' ಎಂದು ತಿಳಿಸಿದ್ದು ಜೊ ಬಿಡೆನ್ ಗೆಲುವಿನ ಅನೇಕ ಸುದ್ದಿಗಳನ್ನು ಉಲ್ಲೇಖಿಸಿದೆ.
ಗೆಲುವು ಸಾಧಿಸಲು 270 ಚುನಾವಣಾ ಮತಗಳ ಅಗತ್ಯವಿದ್ದು ಬಿಡೆನ್ಗೆ 306 ಹಾಗೂ ಟ್ರಂಪ್ಗೆ 232 ಮತಗಳು ಲಭಿಸಿದೆ. ಬಿಡೆನ್ ಈಗಾಗಲೇ 270 ಮತಗಳನ್ನು ದಾಟಿ 306 ಮತಗಳನ್ನು ಪಡೆದಿದ್ದಾರೆ. ಆದರೆ ಸೋಲನ್ನು ಒಪ್ಪಿಕೊಂಡಿಲ್ಲ.