ವಾಷಿಂಗ್ಟನ್, ನ. 18 (DaijiworldNews/MB) : ಅಫ್ಗಾನಿಸ್ತಾನ ಮತ್ತು ಇರಾಕ್ನಲ್ಲಿ ಇರುವ ಅಮೇರಿಕಾದ ಸೈನಿಕರನ್ನು ಮುಂದಿನ ವರ್ಷ ಜನವರಿ 15ರೊಳಗೆ ಕಡಿತಗೊಳಿಸಿ 2,500ಕ್ಕೆ ಇಳಿಸಲಾಗುವುದು ಎಂದು ಅಮೇರಿಕಾ ಘೋಷಣೆ ಮಾಡಿದೆ. ಪ್ರಸ್ತುತ ಅಫ್ಗಾನಿಸ್ತಾನದಲ್ಲಿ ಅಮೆರಿಕದ 4,500 ಸೈನಿಕರು ಇದ್ದಾರೆ.
ಮಂಗಳವಾರ ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೊಫರ್ ಸಿ ಮಿಲ್ಲರ್, ಅಫ್ಗಾನಿಸ್ತಾನ ಮತ್ತು ಇರಾಕ್ನಲ್ಲಿ ಇರುವ ಅಮೇರಿಕಾದ ಸೈನಿಕರನ್ನು ಮುಂದಿನ ವರ್ಷ ಜನವರಿ 15ರೊಳಗೆ ಕಡಿತಗೊಳಿಸಿ 2,500ಕ್ಕೆ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.
ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರೇನ್ ಅವರು, ''ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಅಫ್ಗಾನಿಸ್ತಾನ ಮತ್ತು ಇರಾಕ್ನಲ್ಲಿ ಅಮೇರಿಕಾದ ಸೈನಿಕರ ಸಂಖ್ಯೆ ಕಡಿತಗೊಳಿಸಲಾಗುತ್ತದೆ'' ಎಂದು ಹೇಳಿದರು.
ಹಾಗೆಯೇ ನಮ್ಮ ಸೈನಿಕರು ಸುರಕ್ಷಿತವಾಗಿ ತಮ್ಮ ಮನೆಗೆ ವಾಪಾಸ್ ಬರಲಿ ಎಂಬುದು ಟ್ರಂಪ್ ಅವರ ಆಶಯವಾಗಿದೆ ಎಂದರು.
ಈ ಹಿಂದೆ ಸೇನಾ ಸಿಬ್ಬಂದಿಯನ್ನು ಮನೆಗೆ ವಾಪಸ್ ಕರೆತರುವ ಭರವಸೆಯನ್ನು ಟ್ರಂಪ್ ನೀಡಿದ್ದು ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ ಡೆಮಾಕ್ರಟಿಕ್ ಪಕ್ಷದ ನಾಯಕರು ಈ ತೀರ್ಮಾನಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.