ವಾಷಿಂಗ್ಟನ್, ನ.18 (DaijiworldNews/PY): "ಮುಂದೆ ದಲೈಲಾಮಾ ಅವರ ಆಯ್ಕೆ ಮಾಡಲು ಚೀನಾಕ್ಕೆ ಯಾವುದೇ ಧರ್ಮಶಾಸ್ತ್ರದ ಆಧಾರಗಳಿಲ್ಲ" ಎಂದು ಅಮೇರಿಕಾದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿ ಸ್ಯಾಮುಯೆಲ್ ಡಿ ಬ್ರೌನ್ಬ್ಯಾಕ್ ಹೇಳಿದ್ದಾರೆ.
ಮಂಗಳವಾರ ಕಾನ್ಫರೆನ್ಸ್ ಕಾಲ್ನಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಅಕ್ಟೋಬರ್ನಲ್ಲಿ ನಾನು ಭಾರತದಲ್ಲಿನ ಧರ್ಮಶಾಲಾಕ್ಕೆ ಭೇಟಿ ನೀಡಿದ್ದು, ನಾನು ಅಲ್ಲಿನ ಟಿಬೆಟ್ ಸಮುದಾಯದವರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದೆ ದಲೈ ಲಾಮಾ ಅವರನ್ನು ಚೀನಾ ಆಯ್ಕೆ ಮಾಡುವುದನ್ನು ಅಮೇರಿಕಾ ವಿರೋಧಿಸಲಿದೆ ಎಂದು ಹೇಳಿದ್ದೇನೆ" ಎಂದಿದ್ದಾರೆ.
"ಚೀನಾಕ್ಕೆ ದಲೈ ಲಾಮಾ ಅವರನ್ನು ಆಯ್ಕೆ ಮಾಡುವ ಯಾವುದೇ ಹಕ್ಕಿಲ್ಲ. ಅದನ್ನು ಮಾಡಲು ಅವರಿಗೆ ಯಾವುದೇ ಧರ್ಮಶಾಸ್ತ್ರದ ಆಧಾರವಿಲ್ಲ. ಟಿಬೆಟ್ನ ಬೌದ್ಧರು ನೂರಾರು ವರ್ಷಗಳಿಂದ ಯಶಸ್ವಿಯಾಗಿ ತಮ್ಮ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ, ಮುಂದೆ ದಲೈ ಲಾಮಾ ಅವರನ್ನು ಆಯ್ಕೆ ಮಾಡುವಂತ ಹಕ್ಕು ಅವರಿಗೆ ಮಾತ್ರ ಇರಲಿದೆ" ಎಂದು ಹೇಳಿದ್ದಾರೆ.
"ಧಾರ್ಮಿಕ ಸಮುದಾಯಗಳಿಗೆ ತಮ್ಮದೇ ಆದ ನಾಯಕತ್ವವನ್ನು ತೆಗೆದುಕೊಳ್ಳುವ ಹಕ್ಕಿದೆ. ಇದನ್ನು ಅಮೇರಿಕಾವೂ ಕೂಡಾ ಬೆಂಬಲಿಸುತ್ತದೆ. ಚೀನಾ ಕಮ್ಯುನಿಷ್ಟ್ ಪಕ್ಷವು ದಲೈಲಾಮಾ ಅವರನ್ನು ಆಯ್ಕೆ ಮಾಡುವ ಹಕ್ಕು ತಮಗಿದೆ ಎಂದು ಹೇಳಿದೆ. ಈ ವಿಚಾರವನ್ನು ನಾವು ಒಪ್ಪುವುದಿಲ್ಲ" ಎಂದಿದ್ದಾರೆ.
14ನೇ ದಲೈ ಲಾಮಾ ಅವರಿಗೆ ಈಗ 85 ವರ್ಷ ವಯಸ್ಸು. ಅವರು ಭಾರತದಲ್ಲೇ ನೆಲೆಸಿದ್ದಾರೆ. ಭಾರತದಲ್ಲಿ1.60 ಲಕ್ಷಕ್ಕೂ ಅಧಿಕ ಮಂದಿ ಟಿಬೆಟಿಯನ್ನರು ವಾಸಿಸುತ್ತಿದ್ದಾರೆ.