ಇಸ್ಲಾಮಾಬಾದ್, ನ.19 (DaijiworldNews/PY): "ಯುನೈಟೆಡ್ ಎಮಿರೇಟ್ಸ್ ಬುಧವಾರ ಪಾಕಿಸ್ತಾನದ ಸೇರಿದಂತೆ ಇತರ 12 ದೇಶಗಳ ಪ್ರವಾಸಿಗರಿಗೆ ಹೊಸ ವೀಸಾಗಳ ವಿತರಣೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ" ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.
"ಕೊರೊನಾದ ಎರಡನೇ ಅಲೆಯ ಭೀತಿಯ ಹಿನ್ನೆಲೆ ಯುಎಇ ಈ ತೀರ್ಮಾನವನ್ನು ಕೈಗೊಂಡಿದೆ ಎಂದು ನಾವು ಭಾವಿಸಿದ್ದೇವೆ" ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಪಾಕಿಸ್ತಾನ ಸೇರಿದಂತೆ 12 ದೇಶಗಳಿಗೆ ಮುಂದಿನ ಪ್ರಕಟಣೆ ಬರುವವರೆಗೂ ಯುಎಇ ಹೊಸ ಭೇಟಿ ವೀಸಾಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ಇದರಲ್ಲಿ ಯುಎಇ ಅಧಿಕಾರಿಗಳಿಂದ ಪಾಕ್ ಸರ್ಕಾರ ಅಧಿಕೃತ ದೃಢೀಕರಣವನ್ನು ಕೇಳುತ್ತಿದೆ" ಎಂದಿದ್ದಾರೆ.
ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೊಮಾಲಿಯಾ, ಲಿಬಿಯಾ, ಕೀನ್ಯಾ ಮತ್ತು ಅಫ್ಘಾನಿಸ್ತಾನದ ಪ್ರವಾಸಿಗರಿಗೂ ಕೂಡಾ ಯುಎಇ ವೀಸಾವನ್ನು ನಿರ್ಬಂಧಿಸಿದೆ.
"ಈಗಾಗಲೇ ನೀಡಲಾದ ವೀಸಾಗಳಿಗೆ ಈ ತೀರ್ಮಾನ ಅನ್ವಯವಾಗುವುದಿಲ್ಲ" ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ಎಮಿರೇಟ್ಸ್ ವಿಮಾನದಲ್ಲಿ ಹಾಂಗ್ಕಾಂಗ್ಗೆ ತೆರಳಿದ್ದ ಸುಮಾರು 30 ಪಾಕಿಸ್ತಾನಿಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಕಾರಣದಿಂದ ಪಾಕಿಸ್ತಾನದ ಪ್ರವಾಸಿಗರಿಗೆ ಯುಇ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದು, ಮುಂದಿನ ಆದೇಶ ಬರುವಲ್ಲಿಯ ತನಕ ಇದು ಜಾರಿಯಲ್ಲಿ ಇರಲಿದೆ.