ಜಿನೇವಾ, ನ.20 (DaijiworldNews/PY): "ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾದವರಿಗೆ ಗಿಲ್ಯಾಡ್ಸ್ನ ರೆಮ್ಡೆಸಿವಿರ್ ಔಷಧಿಯನ್ನು ನೀಡಲು ಶಿಫಾರಸ್ಸು ಮಾಡಲಾಗಿಲ್ಲ" ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
"ಈ ಔಷಧಿ ನೀಡುವುದರಿಂದ ಸೋಂಕಿತರು ಬದುಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ ಹಾಗೂ ವೆಂಟಿಲೇಟರ್ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ" ಎಂದು ತಿಳಿಸಿದೆ.
ಕೊರೊನಾಕ್ಕೆ ಚಿಕಿತ್ಸೆ ನೀಡುವಲ್ಲಿ ಈ ಔಷಧಿ ಪರಿಣಾಮಕಾರಿ ಎಂದು ಮೊದಲು ಹೇಳಲಾಗುತ್ತಿತ್ತು. ಇದೀಗ ವಿಶ್ಯ ಆರೋಗ್ಯ ಸಂಸ್ಥೆ ನೀಡಿದ ಹೇಳಿಕೆಯಿಂದ ಗಿಲ್ಯಾಡ್ಸ್ಗೆ ಹಿನ್ನಡೆಯಾಗಿದೆ.
ಅಕ್ಟೋಬರ್ ಅಂತ್ಯದ ವೇಳೆಗೆ ಗಿಲ್ಯಾಡ್ಸ್ 2020ರ ವರ್ಷದಲ್ಲಿನ ಆದಾಯದ ನಿರೀಕ್ಷೆಯನ್ನು ಕಡಿತಗೊಳಿಸಿದ್ದು, ನಿರೀಕ್ಷೆಗಿಂತ ಕಡಿಮೆ ಬೇಡಿಕೆ ಹಾಗೂ ರೆಮ್ಡೆಸಿವಿರ್ ಮಾರಾಟದಲ್ಲಿರುವ ಸವಾಲುಗಳನ್ನು ಉಲ್ಲೇಖಿಸಿ ಕಂಪೆನಿ ಈ ತೀರ್ಮಾನ ತೆಗೆದುಕೊಂಡಿತ್ತು.
"ಪ್ರಸ್ತುತ ವಿಶ್ವದಾದ್ಯಂತ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಮೋದನೆ ಪಡೆದುಕೊಂಡಿರುವ ಎರಡು ಔಷಧಿಗಳಲ್ಲಿ ರೆಮ್ಡೆಸಿವಿರ್ ಒಂದಾಗಿದೆ. ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಪ್ರಯೋಗದ ಸಂದರ್ಭ ಇದರಿಂದ ಯಾವುದೇ ಪರಿಣಾಮವಿಲ್ಲ" ಎಂದು ಹೇಳಿದೆ.