ಸ್ಯಾನ್ ಆಂಟೋನಿಯೊ, ನ.25 (DaijiworldNews/PY): ಶ್ವೇತಭವನ ಹಾಗೂ ಟ್ರಂಪ್ ಟವರ್ ಸೇರಿದಂತೆ ವಿವಿಧ ತಾಣಗಳಿಗೆ ಬಾಂಬ್ ದಾಳಿ ನಡೆಸಲು ಅಥವಾ ಗುಂಡು ಹಾರಿಸಲು ಸಂಚು ರೂಪಿಸಿದ್ದಕ್ಕಾಗಿ ದಕ್ಷಿಣ ಕೆರೊಲಿನಾದ ವ್ಯಕ್ತಿಯೋರ್ವ ಭಯೋತ್ಪಾದಕ ಆರೋಪಕ್ಕೆ ತಪ್ಪೊಪ್ಪಿಕೊಂಡಿದ್ದಾನೆ.
"ಈ ಪ್ರಯತ್ನದ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಪ್ರೇರೇಪಿಸಲಾಗಿದೆ" ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.
ತಪ್ಪೊಪ್ಪಿಕೊಂಡ ವ್ಯಕ್ತಿಯನ್ನು ಕ್ರಿಸ್ಟೋಫರ್ ಸೀನ್ ಮ್ಯಾಥ್ಯೂಸ್ (34) ಎನ್ನಲಾಗಿದೆ.
"ಸ್ಯಾನ್ ಆಂಟೊನಿಯೊ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಈತ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಪೂರಕವಾದ ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ" ಎಂದು ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
"ಕ್ರಿಸ್ಟೋಫರ್ ಸೀನ್ ಮ್ಯಾಥ್ಯೂಸ್ ಮೇ 2019ರಿಂದಲೂ ಕೂಡಾ ಟೆಕ್ಸಾಸ್ನ ಜಯ್ಲಿಯನ್ ಕ್ರಿಸ್ಟೋಫರ್ ಮೊಲಿನಾ (22) ಎಂಬ ವ್ಯಕ್ತಿಯೊಂದಿಗೆ ಸೇರಿ ಈ ಸಂಚು ನಡೆಸಿದ್ದ. ಅಲ್ಲದೇ ಈತ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಪರವಾಗಿ ದೇಶ ಹಾಗೂ ವಿದೇಶಗಳಲ್ಲಿ ಬಾಂಬ್ ದಾಳಿ ನಡೆಸುವ ಸಲುವಾಗಿ ಬಾಂಬ್ ತಯಾರಿಕಾ ತರಬೇತಿಯನ್ನು ಕೂಡಾ ಪಡೆದುಕೊಂಡಿದ್ದ" ಎಂದು ಅಧಿಕಾರಿಗಳು ಹೇಳಿದ್ದಾರೆ.