ವಾಷಿಂಗ್ಟನ್, ನ.25 (DaijiworldNews/PY): ಜಾಗತಿಕ ವ್ಯವಹಾರಗಳ ಬಗೆಗಿನ ವಿಚಾರಗಳನ್ನು ಪ್ರಕಟಿಸುವ ಅಮೇರಿಕಾ ಮೂಲದ ಫಾರಿನ್ ಪಾಲಿಸಿ ನಿಯತಕಾಲಿಕೆಗೆ ಮುಖ್ಯ ಸಂಪಾದಕರಾಗಿ ಭಾರತ ಮೂಲದ ರವಿ ಅಗರ್ವಾಲ್ ಅವರು ನೇಮಕಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರವಿ ಅಗರ್ವಾಲ್ ಅವರು, "ಕೆಲವು ವೈಯುಕ್ತಿಕ ಸುದ್ದಿಗಳು, ಪ್ರಪಂಚದಾದ್ಯಂತದ ಸ್ಪೂರ್ತಿದಾಯಕ ಪತ್ರಕರ್ತರ ಗುಂಪಿನೊಂದಿಗೆ ಕೆಲಸ ಮಾಡುವುದು ನಿಜವಾದ ಭಾಗ್ಯವಾಗಿದೆ. ಫಾರಿನ್ ಪಾಲಿಸಿ ಹಾಗೂ ನಾನು ಒಟ್ಟಾಗಿ ಕೆಲಸ ಮಾಡುವ ದಿನವನ್ನು ನಿರೀಕ್ಷಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ರವಿ ಅಗರ್ವಾಲ್ ಅವರು ಈ ಹಿಂದೆಯೂ ಕೂಡಾ ಇದೇ ನಿಯತಕಾಲಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕರಾಗಿದ್ದು, ಇದೀಗ ಅವರಿಗೆ ಬಡ್ತಿ ನೀಡಿ, ಮುಖ್ಯ ಸಂಪಾದಕರನ್ನಾಗಿ ನೇಮಕ ಮಾಡಲಾಗಿದೆ.
"ರವಿ ಅಗರ್ವಾಲ್ ಅವರು ತಮ್ಮಲ್ಲಿನ ಜಾಗತಿಕ ಮಟ್ಟದ ಉನ್ನತ ಜ್ಞಾನದೊಂದಿಗೆ ಪತ್ರಿಕೆಯನ್ನು ಉತ್ತಮವಾದ ರೀತಿಯಲ್ಲಿ ಹೊರತರಲಿದ್ದಾರೆ. ಆರು ದಶಕಗಳಿಂದ ಪ್ರಕಟವಾಗುತ್ತಿರುವ ಫಾರಿನ್ ಪಾಲಿಸಿ ಪತ್ರಿಕೆಯನ್ನು ರವಿ ಅಗರ್ವಾಲ್ ಅವರು ಮುನ್ನಡೆಸಲಿದ್ದಾರೆ" ಎಂದು ನಿಯತಕಾಲಿಕೆಯ ಸಿಇಒ ಆಯನ್ ಮ್ಯಾಕ್ಡೇನಿಯಲ್ ತಿಳಿಸಿದ್ದಾರೆ.
ರವಿ ಅಗರ್ವಾಲ್ ಅವರು 2018ರಲ್ಲಿ ಫಾರಿನ್ ಪಾಲಿಸಿ ಪತ್ರಿಕೆಗೆ ಸೇರುವ ಮುನ್ನ 11 ವರ್ಷಗಳ ಕಾಲ ಸಿಎನ್ಎನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಏಷ್ಯಾ, ಯುರೋಪ್ ಹಾಗೂ ಉತ್ತರ ಅಮೇರಿಕಾ ಖಂಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ, ಇವರು ಸಿಎನ್ಎನ್ನ ನವದೆಹಲಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.