ಮೆಲ್ಬರ್ನ್, ನ.26(DaijiworldNews/PY): ಭಾರತೀಯ ಮೂಲದ ಡಾ.ಗೌರವ್ ಶರ್ಮಾ ಅವರು ನ್ಯೂಜಿಲೆಂಡ್ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದು, ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹಿಮಾಚಲ ಪ್ರದೇಶದ ಹಮಿರ್ಪುರ್ ಮೂಲದ ಗೌರವ್ ಶರ್ಮಾ (33) ಅವರು ನ್ಯೂಜಿಲೆಂಡ್ನ ಅತ್ಯಂತ ಕಿರಿಯ ಸಂಸದರಲ್ಲಿ ಓರ್ವರು.
ನ್ಯೂಜಿಲೆಂಡ್ನಲ್ಲಿ ಭಾರತದ ರಾಯಭಾರಿಯಾಗಿರುವ ಮುಕ್ತೇಶ್ ಪರ್ದೇಶಿ ಅವರು ಟ್ವೀಟ್ ಮಾಡಿದ್ದು, "ಮೊದಲು ಗೌರವ್ ಶರ್ಮಾ ಅವರು ನ್ಯೂಜಿಲೆಂಡ್ನ ಪ್ರಾದೇಶಿಕ ಮೌರಿ ಭಾಷೆಯಲ್ಲಿ ಹಾಗೂ ಬಳಿಕ ಭಾರತದ ಶಾಸ್ತ್ರೀಯ ಭಾಷೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ಚೀಕರಿಸಿದ್ದು, ಇದರ ಜೊತೆಗೆ ಭಾರತ ಹಾಗೂ ನ್ಯೂಜಿಲೆಂಡ್ ಎರಡೂ ರಾಷ್ಟ್ರಗಳ ಸಾಂಸ್ಕೃತಿಕ ಪಾರಂಪರೆಗೆ ಗೌರವ ಸಲ್ಲಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಹಿಂದಿಯಲ್ಲಿ ಏಕೆ ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ಟ್ವೀಟಿಗರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ನಿಜ ಹೇಳಬೇಕೆಂದರೆ, ನಾನು ಆ ಬಗ್ಗೆ ಯೋಚನೆ ಮಾಡಿಲ್ಲ. ಆದರೆ, ನಂತರ ಅದನ್ನು ಮಾತೃ ಭಾಷೆ ಪಹಾರಿ ಅಥವಾ ಪಂಜಾಬಿನಲ್ಲಿ ಮಾಡುವ ಯೋಚನೆ ಇತ್ತು. ಎಲ್ಲಾ ಭಾರತದ ಭಾಷೆಳಿಗೆ ಮೂಲವಾಗಿರುವಂತ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಸೂಕ್ತವೆನಿಸಿತು" ಎಂದಿದ್ದಾರೆ.
ಗೌರವ್ ಶರ್ಮಾ ಅವರು, ಆಕ್ಲಾಂಡ್ನಲ್ಲಿ ಎಂಬಿಬಿಎಸ್ ಹಾಗೂ ವಾಷಿಂಗ್ಟನ್ನಲ್ಲಿ ಎಂಬಿಎ ಪೂರೈಸಿದ್ದು, ಹ್ಯಾಮಿಲ್ಟನ್ನಲ್ಲಿ ಜನರಲ್ ಪ್ರ್ಯಾಕ್ಟೀಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.