ಮಾಸ್ಕೊ, ನ. 27 (DaijiworldNews/HR): ಕೊರೊನಾ ತಡೆಗಟ್ಟಲು ರಷ್ಯಾ ಅಭಿವೃದ್ಧಿಪಡಿಸಿರುವ 'ಸ್ಪುಟ್ನಿಕ್ ವಿ' ಲಸಿಕೆಯ 10 ಕೋಟಿ ಡೋಸ್ಗಳನ್ನು ಭಾರತದಲ್ಲಿ ಉತ್ಪಾದಿಸಲು ರಷ್ಯಾದ 'ಆರ್ಡಿಐಎಫ್ ಸಾವರಿನ್ ವೆಲ್ತ್ ಫಂಡ್' ಜತೆ ಔಷಧ ತಯಾರಿಕಾ ಸಂಸ್ಥೆ 'ಹೆಟೆರೊ' ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ 'ಹೆಟೆರೊ' ಜತೆಗಿನ ಒಪ್ಪಂದದ ಮೂಲಕ ಆರ್ಡಿಐಎಫ್ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ರಷ್ಯಾದಲ್ಲಿ 'ಸ್ಪುಟ್ನಿಕ್ ವಿ' ಲಸಿಕೆಗೆ ತುರ್ತು ಕಾರ್ಯವಿಧಾನದಡಿಯಲ್ಲಿ ಆಗಸ್ಟ್ನಲ್ಲಿ ಅನುಮೋದನೆ ನೀಡಲಾಗಿದ್ದರೂ ಅದರ ಪರಿಣಾಮಕಾರಿತ್ವ, ಸುರಕ್ಷತೆ ಬಗ್ಗೆ ಪ್ರಯೋಗಗಳು ಇನ್ನೂ ಕೂಡ ನಡೆಯುತ್ತಲೇ ಇವೆ.
ಇನ್ನು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳನ್ನು ನಾವು ಎದುರು ನೋಡುತ್ತಿದ್ದೇವೆ. ಲಸಿಕೆಯ ಸ್ಥಳೀಯ ಉತ್ಪಾದನೆ ನಿರ್ಣಾಯಕ ಪಾತ್ರವಹಿಸಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಹೆಟೆರೊದ ಅಂತರರಾಷ್ಟ್ರೀಯ ಮಾರುಕಟ್ಟೆಯ ನಿರ್ದೇಶಕ ಬಿ.ಮುರಳಿಕೃಷ್ಣ ರೆಡ್ಡಿ ಹೇಳಿದ್ದಾರೆ.