ಬಿಜಿಂಗ್, ನ. 29 (DaijiworldNews/MB) : ಸಾರ್ಸ್ ಕೊರೊನಾ ವೈರಸ್-2 (SARS-CoV-2) 2019ರ ಬೇಸಿಗೆಯಲ್ಲಿ ಭಾರತದಲ್ಲಿ ಹುಟ್ಟಿದೆ. ಕೊರೊನಾ ವೈರಸ್ನ ಉಗಮ ಸ್ಥಾನ ಭಾರತ ಎಂದು ಚೀನಾದ ಉನ್ನತ ಮಟ್ಟದ ವಿಜ್ಞಾನ ಸಂಸ್ಥೆ, 'ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್' ತಂಡ ವಾದಿಸಿದೆ.
ಹೊಸ ಅಧ್ಯಯನ ವರದಿಯೊಂದನ್ನು ಮುಂದಿಟ್ಟಿರುವ ಈ ತಂಡವು ಭಾರತವು ವೈರಸ್ನ ಮೊದಲ ಪ್ರಸರಣಾ ಪ್ರದೇಶವಾಗಿರಬಹುದು. ವುಹಾನ್ನಲ್ಲಿ ಸಾರ್ಸ್ ಕೊರೊನಾ ವೈರಸ್-2ನ ಮಾನವರ ನಡುವಿನ ಪ್ರಸರಣೆ ಸಂಭವಿಸಿದೆ. ಆದರೆ ವುಹಾನ್ನಲ್ಲಿ ವೈರಸ್ ಹರಡುವುದಕ್ಕೂ ಮೊದಲು ವೈರಸ್ ಪ್ರಸರಣೆಗೊಂಡು ಸ್ವಲ್ಪ ಮಟ್ಟಿನ ವಿಕಸನವನ್ನು ಕಂಡಿದೆ. ಕನಿಷ್ಠ ರೂಪಾಂತರಿತ ವೈರಸ್ ತಳಿಯ ಭೌಗೋಳಿಕ ಮಾಹಿತಿ ಮತ್ತು ವೈವಿಧ್ಯತೆಯ ಪ್ರಕಾರ ಇದು ಭಾರತದ್ದು ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ.
ಬಾಂಗ್ಲಾದೇಶ, ಅಮೆರಿಕ, ಗ್ರೀಸ್, ಆಸ್ಟ್ರೇಲಿಯಾ, ಭಾರತ, ಇಟಲಿ, ಜೆಕ್ ರಿಪಬ್ಲಿಕ್, ರಷ್ಯಾ ಮತ್ತು ಸೆರ್ಬಿಯಾವನ್ನು ಈ ವೈರಸ್ ಹುಟ್ಟಿರುವ ಸಂಭಾವ್ಯ ದೇಶಗಳಾಗಿ ಈ ಅಧ್ಯಯನ ಉಲ್ಲೇಖಿಸಿದೆ. ಈ ಪ್ರದೇಶದಲ್ಲಿ ವೈರಸ್ ಜುಲೈ ಅಥವಾ ಆಗಸ್ಟ್ 2019ರಲ್ಲಿ ಹರಡಿದೆ ಎಂದು ಈ ಅಧ್ಯಯನ ಹೇಳಿದೆ.
ಇನ್ನು ಚೀನಾ ಇತರ ದೇಶಗಳನ್ನು ದೂಷಿಸುತ್ತಿರುವುದು ಇದು ಮೊದಲೇನಲ್ಲ ವೈರಸ್ನ ಉಗಮಸ್ಥಾನಕ್ಕೆ ಸಂಬಂಧಿಸಿದಂತೆ ಚೀನಾ ಇತರ ದೇಶಗಳನ್ನು ಹಲವು ಬಾರಿ ದೂಷಿಸಿದೆ. ಈ ಹಿಂದೆ ಇಟಲಿ ಮತ್ತು ಅಮೇರಿಕಾ ಕೊರೊನಾ ವೈರಸ್ನ ಉಗಮ ಸ್ಥಾನ ಎಂದು ಚೀನಾ ಹೇಳಿತ್ತು.