ವಾಷಿಂಗ್ಟನ್, ನ.30 (DaijiworldNews/PY): ಭಾರತೀಯ ಮೂಲದ ಮಹಿಳೆಯೋರ್ವರು ಅಮೇರಿಕಾದ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಅವರ ತಂಡಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
ಬಜೆಟ್ ಹಾಗೂ ನಿರ್ವಹಣಾ ಕಚೇರಿಯ ನಿರ್ದೇಶಕರನ್ನಾಗಿ ಭಾರತ ಮೂಲದ ಅಮೇರಿಕನ್ ನೀರಾ ಟಂಡನ್ (50) ಅವರನ್ನು ಜೊ ಬಿಡೆನ್ ಅವರು ನೇಮಕ ಮಾಡುವ ಸಾಧ್ಯತೆಗಳಿವೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ವಿಚಾರವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದ್ದು, ನೀರಾ ಟಂಡನ್ ಅವರು ಶ್ವೇತಭವನದ ಪ್ರಭಾವಿ ಸ್ಥಾನವಾದ ಆಡಳಿತ ಬಜೆಟ್ ನಿರ್ವಹಣಾ ಕಚೇರಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ.
ಟಂಡನ್ ಅವರು ಸದ್ಯ ಎಡಪಂಥೀಯ ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ನ ಮುಖ್ಯ ಕಾರ್ಯನಿರ್ವಹಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೀರಾ ಟಂಡನ್ ಅವರು 1970ರಲ್ಲಿ ಮೆಸಾಚ್ಯುಸೆಟ್ಸ್ನ ಬೆಡ್ಫೋರ್ಡ್ನಲ್ಲಿ ಜನಿಸಿದ್ದು, ಇವರು ಭಾರತದಿಂದ ಅಮೇರಿಕಾಕ್ಕೆ ವಲಸೆ ಹೋದ ದಂಪತಿಯ ಪುತ್ರಿಯಾಗಿದ್ದಾರೆ. ಟಂಡನ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಕಲಾ ವಿಷಯದಲ್ಲಿ ಪದವಿ ಪಡೆದಿದ್ದು, ಯಾಲೆ ವಿಶ್ವವಿದ್ಯಾಲಯದಿಂದ 1996ರಲ್ಲಿ ಜ್ಯೂರಿಸ್ ಡಾಕ್ಟರ್ ಪದವಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, "ನೀರಾ ಟಂಡನ್ ಅವರನ್ನು ಅಮೇರಿಕಾದ ಖಜಾನೆ ಕಾರ್ಯದರ್ಶಿಯಾಗಿ ನಿಯೋಜನೆಯಾಗಿರುವ ಜಾನೆಟ್ ಎಲೆನ್ ಅವರ ಜೊತೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಉದಾರವಾದಿ ಆರ್ಥಿಕ ಸಲಹೆಗಾರರ ತಂಡ ಕಟ್ಟುವ ಜೊ ಬಿಡೆನ್ ಅವರ ಯೋಜನೆಯ ಒಂದು ಭಾಗವಾಗಿ ನೇಮಕ ಮಾಡಲಾಗುತ್ತಿದೆ" ಎಂದಿದೆ.
"ನೀರಾ ಟಂಡನ್ ಸೇರಿದಂತೆ ಎಲೆನ್ ಹಾಗೂ ಇತರರ ಅಧಿಕೃತ ನೇಮಕವನ್ನು ಶೀಘ್ರವೇ ಪ್ರಕಟಿಸುವಂತ ನಿರೀಕ್ಷೆ ಇದೆ" ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.