ಸಿಡ್ನಿ, ನ.30 (DaijiworldNews/PY): ಟ್ವಿಟ್ಟರ್ನಲ್ಲಿ ಚೀನಾದ ಅಧಿಕಾರಿಯೋರ್ವರು ಹಂಚಿಕೊಂಡಿರುವ ಆಸ್ಟ್ರೇಲಿಯಾ ಯೋಧನ ಚಿತ್ರ ನಕಲಿ ಎಂದು ಹೇಳಿರುವ ಆಸ್ಟ್ರೇಲಿಯಾ, ಟ್ವಿಟ್ಟರ್ನಿಂದ ಚಿತ್ರವನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ.
ಆಸ್ಟ್ರೇಲಿಯಾದ ಯೋಧನೋರ್ವ ಅಫ್ಘಾನಿಸ್ತಾನದ ಮಗುವಿನ ಕುತ್ತಿಗೆಗೆ ಚಾಕುವಿನಿಂದ ಹಿಡಿದಿರುವ ಚಿತ್ರವನ್ನು ಟ್ವಿಟ್ಟರ್ನಲ್ಲಿ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿಜಿಯಾನ್ ಜಾವೋ ಹಂಚಿಕೊಂಡಿದ್ದು, "ಆಸ್ಟ್ರೇಲಿಯಾದ ಯೋಧರು ನಡೆಸಿದ ಅಫ್ಘಾನ್ ನಾಗರಿಕರ ಹಾಗೂ ಕೈದಿಗಳ ಹತ್ಯೆಯು ಆಘಾತವನ್ನುಂಟು ಮಾಡಿದೆ. ಈ ರೀತಿಯಾದ ಕೃತ್ಯಗಳನ್ನು ನಾವು ಖಂಡಿಸುತ್ತೇವೆ. ಆಸ್ಟ್ರೇಲಿಯಾವನ್ನು ಈ ಕೃತ್ಯಗಳಿಗೆ ಹೊಣೆಗಾರರನ್ನಾಗಿ ಮಾಡಲು ಕರೆ ನೀಡುತ್ತೇವೆ" ಎಂದು ಬರೆದುಕೊಂಡಿದ್ದರು.
ಈ ವಿಚಾರದ ಹಿನ್ನೆಲೆ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸ್ಸನ್ ಅವರು ಮಾಧ್ಯಮಗೋಷ್ಠಿ ನಡೆಸಿದ್ದು, "ಈ ವಿಚಾರವಾಗಿ ಚೀನಾ ಆಸ್ಟ್ರೇಲಿಯಾದೊಂದಿಗೆ ಕ್ಷಮೆಯಾಚಿಸಬೇಕು. ಕೂಡಲೇ ತಮ್ಮ ಖಾತೆಯಿಂದ ಲಿಜಿಯಾನ್ ಜಾವೋ ಆ ಪೋಸ್ಟ್ ಅನ್ನು ತೆಗೆದು ಹಾಕಬೇಕು" ಎಂದು ಒತ್ತಾಯಿಸಿದ್ದಾರೆ.