ವಾಷಿಂಗ್ಟನ್, ಡಿ.01 (DaijiworldNews/PY): ಕೊರೊನಾ ವಿರುದ್ಧದ ಹೋರಾಟ ಸೇರಿದಂತೆ ಜಾಗತಿಕ ವಿಷಯಗಳ ಬಗ್ಗೆ ತಮ್ಮ ಸಹಭಾಗಿತ್ವವನ್ನು ಬಲಪಡಿಸುವ ಅಗತ್ಯತೆಯ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರೊಂದಿಗೆ ಅಮೇರಿಕಾದ ಅಧ್ಯಕ್ಷರಾಗಿ ಚುನಾಯಿತರಾದ ಜೊ ಬಿಡೆನ್ ಅವರು ಮಂಗಳವಾರ ಮಾತುಕತೆ ನಡೆಸಿದರು.
ಹವಾಮಾನ ವೈಪರಿತ್ಯ ವಿರುದ್ಧದ ಹೋರಾಟ, ಭವಿಷ್ಯದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಯೋಜನೆ ರೂಪಿಸುವುದು, ಮಾನವೀಯ ಸಮಸ್ಯೆಗಳನ್ನು ಬಗೆಹರಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವುದು, ಶಾಂತಿ ಹಾಗೂ ಸುರಕ್ಷತೆಯನ್ನು ಎತ್ತಿಹಿಡಿಯುವುದು, ಸಂಘರ್ಷಗಳ ಪರಿಹಾರ ಹಾಗೂ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕಗಳನ್ನು ಉತ್ತೇಜಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ.
ಈ ವೇಳೆ ಜೊ ಬಿಡೆನ್ ಅವರು ಇಥಿಯೋಪಿಯಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಹಾಗೂ ಆ ಘಟನೆಯಿಂದ ನಾಗರಿಕರಿಗೆ ಉಂಟಾಗುವ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಾಳಜಿ ತೋರಿದರು.
ಬಳಿಕ ಬಿಡೆನ್ ಅವರು ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಅವರೊಂದಿಗೆ ಮಾತನಾಡಿದ್ದು, ಕೊರೊನಾದ ವಿರುದ್ದ ಹೋರಾಡಲು ಸಹಕರಿಸುವುದಾಗಿ ತಿಳಿಸಿದರು.
ಆರ್ಥಿಕ ಸಮೃದ್ಧಿಯನ್ನು ಮುನ್ನಡೆಸುವುದು, ಹವಾಮಾನ ವೈಪರಿತ್ಯ ವಿರುದ್ಧದ ಹೋರಾಟ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಬಗ್ಗೆ ಮಾತುಕತೆ ನಡೆಸಿದರು.