ಕರಾಚಿ, ಡಿ.01 (DaijiworldNews/PY): ಪಾಕ್ನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಕಿರಿಯ ಪುತ್ರಿ ಆಸೀಫಾ ಭುಟ್ಟೋ ಜರ್ದಾರಿ ಅವರು ರಾಜಕೀಯ ಪ್ರವೇಶ ಮಾಡಿದ್ದಾರೆ.
ನ.30ರ ಸೋಮವಾರದಂದು ಮುಲ್ತಾನ್ನಲ್ಲಿ ನಡೆದ ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿಯ ರ್ಯಾಲಿಯಲ್ಲಿ ಆಸೀಫಾ ಅವರು ಪಾಲ್ಗೊಂಡಿದ್ದು, ತಮ್ಮ ಸಹೋದರನ ಪರವಾಗಿ ಆಸೀಫಾ ಅವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಜನರನ್ನುದ್ದೇಶಿಸಿ ಮಾತನಾಡಿದ ಅವರು, "ನನ್ನ ತಾಯಿ ಬೆನಜೀರ್ ಭುಟ್ಟೋ ಅವರು ಪ್ರಜಾಪ್ರಭುತ್ವಕ್ಕೆ ಮಾಡಿರುವ ತ್ಯಾಗವನ್ನು ಮನನ ಮಾಡಿಕೊಳ್ಳಿ. ನಿಜವಾದ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಸುತ್ತಿರುವ ತನ್ನ ಸಹೋದರ ಬಿಲಾವಾಲ್ ಭುಟ್ಟೋ ಅವರಿಗೂ ಬೆಂಬಲ ನೀಡಿ" ಎಂದರು.
"ನನ್ನ ಸಹೋದರನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನನ್ನ ತಾಯಿಗೆ ಬೆಂಬಲ ನೀಡಿದಂತೆ ನನ್ನ ಸಹೋದರನಿಗೂ ಕೂಡಾ ಬೆಂಬಲ ನೀಡಿ. ನನ್ನ ಸಹೋದರನೊಂದಿಗೆ ನಿಲ್ಲುತ್ತೀರ ಎನ್ನುವ ವಿಶ್ವಾಸ ನನಗಿದೆ. ಪ್ರತಿ ಹಂತದಲ್ಲೂ ಕೂಡಾ ಬಿಲಾವಲ್ ನಿಮಗೆ ಬೆಂಬಲ ನೀಡುತ್ತಾನೆ" ಎಂದು ಹೇಳಿದರು.
"ಪಾಕಿಸ್ತಾನ ಪೀಪಲ್ಸ್ ಪಕ್ಷದ ಕಾರ್ಯಕರ್ತರನ್ನು ಬಂಧನ ಮಾಡಿದ್ದಲ್ಲಿ ಸರ್ಕಾರದ ವಿರುದ್ಧ ಅವರ ಸಹೋದರಿಯರು ಪ್ರತಿಭಟನೆ ನಡೆಸುತ್ತಾರೆ. ಅಲ್ಲದೇ, ದೇಶವನ್ನು ರಕ್ಷಿಸಲೂ ಕೂಡಾ ಅವರು ಮುಂದಾಗುತ್ತಾರೆ" ಎಂದು ಎಚ್ಚರಿಕೆ ನೀಡಿದರು.