ವೆಲ್ಲಿಂಗ್ಟನ್, ಡಿ.02 (DaijiworldNews/MB) : ಬುಧವಾರ ನ್ಯೂಜಿಲೆಂಡ್ ಸರ್ಕಾರವು ಸಾಂಕೇತಿಕವಾಗಿ ಹವಾಮಾನ ತುರ್ತುಪರಿಸ್ಥಿತಿ ಘೋಷಣೆಯ ನಿರ್ಣಯ ಕೈಗೊಂಡಿದ್ದು ಸರ್ಕಾರದ ಈ ನಿರ್ಣಯವನ್ನು 76–43 ಮತಗಳಿಂದ ಅಂಗೀಕಾರ ಮಾಡಲಾಗಿದೆ.
ಜಪಾನ್, ಕೆನಡಾ, ಫ್ರಾನ್ಸ್ ಮತ್ತು ಬ್ರಿಟನ್ ಸೇರಿದಂತೆ 30 ಕ್ಕೂ ಅಧಿಕ ರಾಷ್ಟ್ರಗಳು ಈಗಾಗಲೇ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿದ್ದು ಬುಧವಾರ ನ್ಯೂಜಿಲೆಂಡ್ ಸರ್ಕಾರವು ನಿರ್ಣಯ ಕೈಗೊಂಡಿದೆ. ಸರ್ಕಾರ ಈ ನಿರ್ಣಯದ ಪರವಾಗಿ 76 ಶಾಸಕರು ಮತ ಚಲಾಯಿಸಿದ್ದು 43 ಮಂದಿ ವಿರೋಧ ಮತ ಚಲಾಯಿಸಿದ್ದಾರೆ. ಬಹುಮತ ಪರವಾಗಿ ಇದ್ದ ಹಿನ್ನೆಲೆ ಈ ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ.
ಎಲೆಕ್ಟ್ರಿಕ್ ಕಾರುಗಳ ಖರೀದಿ, ಕಲ್ಲಿದ್ದಲು ಬಾಯ್ಲರ್ಗಳನ್ನು ನಿಷೇಧದಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ 2025ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ತಟಸ್ಥಗೊಳಿಸುಂತಹ ಸರ್ಕಾರದ ಯತ್ನ ಇದಾಗಿದೆ.
ಈ ಬಗ್ಗೆ ಮಾತನಾಡಿದ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡೆನ್, ''ಸರ್ಕಾರವು ನೈಸರ್ಗಿಕ ವಿಪತ್ತುಗಳಂತಹ ವಿಚಾರದಲ್ಲಿ ಮಾತ್ರ ತುರ್ತು ಪರಿಸ್ಥಿತಿ ಘೋಷಿಸುತ್ತದೆ. ಆದರೆ ಹವಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಪ್ರಕೃತಿ ವಿಕೋಪಗಳು ನಡೆಯುತ್ತಲ್ಲೇ ಇರುತ್ತದೆ. ಆದರೆ ಈ ಘೋಷಣೆ ನಮ್ಮ ಮುಂದಿನ ಪೀಳಿಗೆಗೆ ಎದುರಾಗಲಿರುವ ಸಮಸ್ಯೆಗಳಿಗೆ ಪರಿಹಾರವಲ್ಲ'' ಎಂದು ತಿಳಿಸಿದ್ದಾರೆ.