ವಿಶ್ವಸಂಸ್ಥೆ, ಡಿ.04 (DaijiworldNews/PY): "ಆಯ್ದ ಮೂರು ಧರ್ಮಗಳ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿರುವ ವಿಶ್ವಸಂಸ್ಥೆಯ ಕ್ರಮವನ್ನು ಭಾರತವು ವಿರೋಧಿಸಿದ್ದು, ವಿಶ್ವಸಂಸ್ಥೆಯು ಹಿಂದೂ, ಸಿಖ್ಖ್ ಹಾಗೂ ಬೌದ್ಧ ಧರ್ಮಗಳ ವಿರುದ್ಧ ನಡೆಯುತ್ತಿರುವ ಹಿಂಸೆಗಳನ್ನು ಪತ್ತೆ ಮಾಡುವಲ್ಲಿ ವಿಫಲವಾಗಿದೆ" ಎಂದಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶಾಂತಿ ಸಂಸ್ಕೃತಿಯ ವಿಚಾರದ ಬಗ್ಗೆ ನಡೆದ ಅಧಿವೇಶನದ ಸಂದರ್ಭ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಸಮಿತಿಯ ಕಾರ್ಯದರ್ಶಿ ಆಶಿಷ್ ಶರ್ಮಾ, "ಕ್ರೈಸ್ತ, ಇಸ್ಲಾಂ ಹಾಗೂ ಯಹೂದಿ ಧರ್ಮಗಳಿಗೆ ಶಾಂತಿ ಸಂಸ್ಕೃತಿಯನ್ನು ಸೀಮಿತಗೊಳಿಬಾರದು. ಈ ರೀತಿಯಾದ ಸೀಮಿತತೆ ಇದ್ದರೆ ವಿಶ್ವದಲ್ಲಿ ನಿಜಾರ್ಥದಲ್ಲಿ ಶಾಂತಿಯ ಸಂಸ್ಕೃತಿ ನೆಲೆನಿಲ್ಲಲು ಸಾಧ್ಯವಿಲ್ಲ" ಎಂದಿದ್ದಾರೆ.
ಸಿಖ್ಖ್ ಹಾಗೂ ಬೌದ್ಧ ಧರ್ಮಗಳ ವಿರುದ್ಧ ನಡೆಯುತ್ತಿರುವ ಹಿಂಸೆಗಳನ್ನು ಗುರುತಿಸುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ. ಅಫ್ಗಾನಿಸ್ತಾನದಲ್ಲಿ ಮೂಲಭೂತವಾದಿಗಳು ಬಮಿನಾನ್ ಬುದ್ಧನ ಪ್ರತಿಮೆಯನ್ನು ಧ್ವಂಸ ಮಾಡಿದ್ದು, ಗುರುದ್ವಾರದ ಮೇಲೆ ಬಾಂಬ್ ದಾಳಿ ಮಾಡಿ 25 ಸಿಖ್ಖರನ್ನು ಹತ್ಯೆ ಮಾಡಿದ್ದರು. ವಿವಿಧ ರಾಷ್ಟ್ರಗಳಲ್ಲಿ ಬೌದ್ಧರ ಹಾಗೂ ಹಿಂದೂ ದೇವಸ್ಥಾನಗಳನ್ನು ನಾಶ ಮಾಡಿರುವ ಘಟನೆಗಳ ಬಗ್ಗೆ ತಿಳಿಸಿದ್ದಾರೆ.
"ನಾವು ಈ ಸಂದರ್ಭ ನಾಗರಿಕತೆಗಳ ಒಗ್ಗೂಡುವಿಕೆ ಬಗ್ಗೆ ಮಾತನಾಡಬೇಕಿದೆ. ಬದಲಾಗಿ ಸಂಘರ್ಷವನ್ನು ಸೃಷ್ಠಿ ಮಾಡಬಾರದು. ಈ ನಿಟ್ಟಿನಲ್ಲಿ ಇಲ್ಲಿರುವಂತ ಸದಸ್ಯರು ಎಲ್ಲರನ್ನೂ ಕೂಡಾ ಸಮಾನವಾಗಿ ಪರಿಗಣಿಸಿ ಮಾತನಾಡಬೇಕಿದೆ. ಧರ್ಮಾಧಾರಿತ ಹಿಂಸಾಚಾರದ ವಿಚಾರವಾಗಿ ತೀರ್ಮಾನ ಅಂಗೀಕಾರ ಮಾಡುವ ಸಂದರ್ಭ ಈ ಮೂರು ಧರ್ಮಗಳನ್ನು ಕೂಡಾ ಸೇರಿಸಬೇಕು" ಎಂದಿದ್ದಾರೆ.