ವಾಷಿಂಗ್ಟನ್, ಡಿ.05 (DaijiworldNews/HR): ಈ ಹಿಂದೆ ಎಂದೂ ಕಾಣದಂತಹ ಸಚಿವ ಸಂಪುಟ, ಶ್ವೇತಭವನದ ಕಚೇರಿ ಸೇರಿದಂತೆ ವೈವಿಧ್ಯ ಆಡಳಿತವನ್ನು ನನ್ನ ಸರ್ಕಾರದಲ್ಲಿ ಕಾಣಬಹುದು ಎಂದು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹೇಳಿದ್ದಾರೆ.
ವೈವಿಧ್ಯ ಆಡಳಿತ ಎಂಬಂತೆ ಆಫ್ರಿಕನ್– ಅಮೇರಿಕಾನ್ ಸಮುದಾಯದವರು ಸೇರಿದಂತೆ, ಕೆಲವು ಗುಂಪುಗಳು, ಹೊಸ ಆಡಳಿತದಲ್ಲಿ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ, ಬಿಡೆನ್ ನಮ್ಮದು ಎಲ್ಲರನ್ನೊಳಗೊಂಡ ವೈವಿಧ್ಯಮಯ ಆಡಳಿತವಾಗಲಿದೆ ಎಂದು ಹೇಳಿದ್ದಾರೆ.
ಇನ್ನು "ನಮ್ಮ ಆಡಳಿತದಲ್ಲಿ ಎಲ್ಲ ವರ್ಗದವರೂ ಇರುತ್ತಾರೆ. ಆದರೆ, ಯಾವ ಇಲಾಖೆಯಲ್ಲಿ ಏನು ಮಾಡುತ್ತೇನೆಂದು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ನಮ್ಮ ಆಡಳಿತದಲ್ಲಿ ಅಮೇರಿಕಾದಲ್ಲಿರುವ ಲಿಂಗ, ವರ್ಣ, ಸಮುದಾಯ ಆಧಾರಿತವಾಗಿ ಎಲ್ಲರಿಗೂ ಪ್ರಾತಿನಿಧ್ಯ ಸಿಗಲಿದೆ" ಎಂದು ಹೇಳಿದ್ದಾರೆ.