ಲಂಡನ್, ಡಿ.05 (DaijiworldNews/MB) : ಭಾರತದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿ ಆತಂಕ ವ್ಯಕ್ತಪಡಿಸಿದ ಬಳಿಕ ಇದೀಗ ಲೇಬರ್ ಪಾರ್ಟಿ ನೇತೃತ್ವದ 36 ಬ್ರಿಟನ್ ಸಂಸದರು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿ ತಿಳಿಸಿದೆ.
ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಅವರಿಗೆ ಲೇಬರ್ ಪಕ್ಷದ ಸಂಸದ ತನ್ಮಂಜೀತ್ ಸಿಂಗ್ ಧೇಶಿ ಅವರು ಪತ್ರ ಬರೆದಿದ್ದು, ಭಾರತ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೊಳಿಸಿದೆ. ಕೊರೊನಾ ನಡುವೆಯೂ ಭಾರತದಲ್ಲಿ ರೈತರ ಪ್ರತಿಭಟನೆಗೆ ಪ್ರಚೋದನೆ ನೀಡಿದೆ. ರೈತರನ್ನು ಶೋಷಣೆಯಿಂದ ರಕ್ಷಿಸಲು ಹಾಗೂ ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಬರೆದಿದ್ದಾರೆ.
ಬ್ರಿಟನ್ನಲ್ಲಿರುವ ಸಿಖ್ಖರಿಗೆ ಹಾಗೂ ಪಂಜಾಬ್ಗೆ ಸಂಬಂಧಿಸಿದವರಿಗೆ ರೈತರ ಪ್ರತಿಭಟನೆಯು ಬಹು ಕಾಳಜಿಯ ವಿಚಾರವಾಗಿದೆ. ಭಾರತದ ಇತರ ರಾಜ್ಯಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಹಲವಾರು ಬ್ರಿಟಿಷ್ ಸಿಖ್ಖರು ಹಾಗೂ ಪಂಜಾಬಿಗಳು ತಮ್ಮ ಸಂಸದರ ಮೂಲಕ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಸಂಸದರು ಹೇಳಿದ್ದಾರೆ.