ದುಬೈ, ಡಿ.06 (DaijiworldNews/PY): ಯೆಮನ್ನ ಬಂಡುಕೋರ ಸಂಘಟನೆ ಹೌಥಿ ವಶದಲ್ಲಿದ್ದ 14 ಭಾರತೀಯರನ್ನು ಬಿಡುಗಡೆ ಮಾಡಿದ್ದು, ಶನಿವಾರ ಅವರು ದುಬೈನಿಂದ ಭಾರತಕ್ಕೆ ಮರಳಿದ್ದಾರೆ.
"ಹಡಗು ಯೆಮೆನ್ ಬಳಿಯ ಆಡೆನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರಿದ್ದ ಹಡಗು ಮುಳುಗಿತ್ತು. ಫೆ.14ರಂದು ಇವರನ್ನು ಯೆಮನ್ನ ಹೌಥಿ ಬಂಡುಕೋರ ಸಂಘಟನೆ ವಶಕ್ಕೆ ತೆಗೆದುಕೊಂಡಿತ್ತು" ಎಂದು ಯೆಮನ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಪ್ರಕರಣೆಯಲ್ಲಿ ತಿಳಿಸಿದೆ.
ಈ' ಭಾರತೀಯರು ತಮ್ಮ ಪಾಸ್ಪೋರ್ಟ್ ಹಾಗೂ ಎಲ್ಲಾ ದಾಖಲೆಗಳನ್ನು ಕಳೆದುಕೊಂಡಿದ್ದರು. ಸತತ ಪ್ರಯತ್ನದ ಬಳಿಕ ಇವರನ್ನು ನ.28ರಂದು ಬಿಡುಗಡೆ ಮಾಡಲು ಸಾಧ್ಯವಾಯಿತು 'ಎಂದು ಪ್ರಕಟಣೆ ತಿಳಿಸಿದೆ.
"ಕಳೆದ ಹತ್ತು ತಿಂಗಳ ವೇತನವನ್ನು ಈ 14 ಮಂದಿಗೆ ನೀಡಿಲ್ಲ. ತಕ್ಷಣವೇ ಬಾಕಿ ವೇತನವನ್ನು ನೀಡುವಂತೆ ಉದ್ಯೋಗದಲ್ಲಿದ್ದ ಒಮಾನ್ ಮೂಲದ ಕಂಪೆನಿ ಹಾಗೂ ಅಲ್ಲಿ ಸರ್ಕಾರವನ್ನು ಈ 14 ಮಂದಿ ನಾವಿಕರು ಒತ್ತಾಯಿಸಿದ್ದಾರೆ" ಎಂಬುದಾಗಿ ಗಲ್ಫ್ ಮಹಾರಾಷ್ಟ್ರ ಬಿಸಿನೆಸ್ ಫೋರಂನ ಚಂದ್ರಶೇಖರ್ ಭಾಟಿಯಾ ತಿಳಿಸಿದ್ದಾರೆ.
ಬಿಡುಗಡೆಯಾದ 14 ಮಂದಿಯನ್ನು ಮೋಹನ್ ರಾಜ್ ತಾನಿಗಾಚಲಂ, ವಿಲಿಯಂ ನಿಕಾಮ್ಡೆನ್, ಅಹ್ಮದ್ ಅಬ್ದುಲ್ ಗಫೂರ್ ವಾಕಂಕರ್, ಫರುಜ್ ನಸ್ರುದ್ದೀನ್ ಝಾರಿ, ಸಂದೀಪ್ ಬಾಲು ಲೋಹರ್, ನಿಲೇಶ್ ಧನರಾಜ್ ಲೋಹರ್, ಹಿರೋನ್ ಎಸ್.ಕೆ, ದಾವೂದ್ ಮಹಮ್ಮದ್ ಜಿವ್ರಾಕ್, ಚೇತನ್ ಹರಿ ಚಂದ್ರ ಗವಾಸ್, ತನ್ಮಯ್ ರಾಜೇಂದ್ರ ಮಾನೆ, ಸಂಜೀವ್ ಕುಮಾರ್, ಮಣಿರಾಜ್ ಮರಿಯಪ್ಪನ್, ಪ್ರವೀಣ್ ತಮ್ಮಕರಂತವಿದಾ, ಅಬ್ದುಲ್ ವಹಾಬ್ ಮುಸ್ತಾಬಾ ಎನ್ನಲಾಗಿದೆ.