ಜಕಾರ್ತಾ,ಡಿ. 06 (DaijiworldNews/HR): ಇಂಡೊನೇಷ್ಯಾದ ಸಾಮಾಜಿಕ ವ್ಯವಹಾರಗಳ ಸಚಿವನನ್ನು ಕೊರೊನಾ ಸಂತ್ರಸ್ತರ ಆಹಾರ ಯೋಜನೆಗೆ ಸಂಬಂಧಿಸಿದಂತೆ 8.85 ಕೋಟಿ ಲಂಚ ಸ್ವೀಕರಿಸಿದ ಆರೋಪದಡಿ ಬಂಧಿಸಲಾಗಿದೆ.
ಸಚಿವ ಜೂಲಿಯಾರಿ ಬಟುಬರಾ ಅವರನ್ನು ಇಂಡೊನೇಷ್ಯಾದ ಭ್ರಷ್ಟಾಚಾರ ನಿಗ್ರಹ ದಳವು ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ₹8.85 ಕೋಟಿ ಮೊತ್ತವನ್ನು ಒಳಗೊಂಡ ಸೂಟ್ಕೇಸ್, ಬ್ಯಾಗ್ ಅನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಇಂಡೊನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಅವರು, "ಇದು ಜನರ ಹಣವಾಗಿದ್ದು, ಕೊರೊನಾ ಸಮಯದಲ್ಲಿ ಆರ್ಥಿಕತೆ ವೃದ್ಧಿಸಲು ಇದರ ಅಗತ್ಯವಿದೆ. ನಾನು ಯಾವುದೇ ಭ್ರಷ್ಟರಿಗೆ ರಕ್ಷಣೆ ನೀಡುವುದಿಲ್ಲ" ಎಂದರು.
ಇನ್ನು ಸಚಿವ ಜೂಲಿಯಾರಿ ಬಟುಬರಾ ಅವರು ಸರ್ಕಾರದ ಆಹಾರ ಯೋಜನೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಿದ್ದು,ಸಂತ್ರಸ್ಥರಿಗೆ ಆಹಾರ ವಿತರಣೆಯ ಗುತ್ತಿಗೆ ಪಡೆದಿದ್ದ ವ್ಯಕ್ತಿಗಳಿಬ್ಬರಿಂದ ಸುಮಾರು 8.85 ಕೋಟಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.