ಲಂಡನ್, ಡಿ.07 (DaijiworldNews/MB) : ಭಾರತದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ದ ಕಳೆದ 12 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಲ್ಲಿದೆ. ಈ ನಡುವೆ ಭಾರತ ಸರ್ಕಾರ ಜಾರಿಗೆ ತಂದಿರುವ ಈ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಂಡನ್ನಲ್ಲಿ ರವಿವಾರ ಸಾವಿರಾರು ಜನರು ಪ್ರತಿಭಟನೆ ನಡೆಸಿದರು.
ಬ್ರಿಟಿಷ್ ರಾಜಧಾನಿಯ ಮಧ್ಯಭಾಗದಲ್ಲಿರುವ ಆಲ್ಡ್ವಿಚ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಪ್ರತಿಭಟನಾಕಾರರ ಗುಂಪು ಸೇರಿಕೊಂಡು, ಈ ಪ್ರದೇಶದಲ್ಲಿ ಮೆರವಣಿಗೆ ನಡೆಸಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಸೆಪ್ಟೆಂಬರ್ನಲ್ಲಿ ಅಂಗೀಕರಿಸಲ್ಪಟ್ಟ ಈ ಮೂರು ಕೃಷಿ ಮಸೂದೆಗಳ ವಿರುದ್ದ ತೀವ್ರವಾಗಿ ಪ್ರತಿಭಟನೆ ನಡೆಯುತ್ತಲ್ಲೇ ಇದ್ದು ಸೋಮವಾರ ಈ ಪ್ರತಿಭಟನೆಯು 12 ದಿನಕ್ಕೆ ಕಾಲಿರಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ಐದು ಸುತ್ತಿನ ಮಾತುಕತೆ ನಡೆದಿದ್ದು ಎಲ್ಲಾ ಮಾತುಕತೆಗಳು ವಿಫಲವಾಗಿದೆ. ರೈತರು ಈ ಮೂರು ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಪಟ್ಟು ಹಿಡಿದ್ದಿದ್ದರೆ ಇತ್ತ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಲು ಮಾತ್ರ ನಾವು ಸಿದ್ದ ಎಂದು ಹೇಳಿದೆ.
ಅಷ್ಟೇ ಅಲ್ಲದೇ ಐದನೇ ಸುತ್ತಿನ ಮಾತುಕತೆಯ ವೇಳೆ ರೈತರು ಮೌನ ಪ್ರತಿಭಟನೆಯನ್ನು ಕೂಡಾ ನಡೆಸಿದ್ದರು. ಹಾಗೆಯೇ ರೈತ ಮುಖಂಡರು ಡಿ. 8 ರಂದು ಭಾರತ್ ಬಂದ್ಗೆ ಕರೆ ನೀಡಿದ್ದು ಇದಕ್ಕೆ ಹಲವು ಪಕ್ಷಗಳು ಬೆಂಬಲ ಸೂಚಿಸಿದೆ. ಬಳಿಕ ಡಿ.9 ರಂದು ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ 6 ನೇ ಸುತ್ತಿನ ಮಾತುಕತೆ ನಡೆಯಲಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಭಾರತ ಸರ್ಕಾರದ ಈ ನೂತನ ಕೃಷಿ ಕಾಯ್ದೆಗಳ ವಿರುದ್ದ ಲಂಡನ್ನಲ್ಲಿಯೂ ಆಕ್ರೋಶ ಭುಗಿಳೆದಿದ್ದು ಲಂಡನ್ನಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಲಂಡನ್ನಲ್ಲಿ ನಡೆದ ಈ ಪ್ರತಿಭಟನೆಯ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ ಎಂದು ಹೇಳಲಾಗಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೆಲವರು ಮಾತ್ರ ಮಾಸ್ಕ್ ಧರಿಸಿದ್ದರು.
ಜನರು ಕೊರೊನಾ ನಿಯಮ ಪಾಲಿಸದ ಕಾರಣದಿಂದ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಸಿ, ಸ್ಥಳದಿಂದ ತೆರಳುವಂತೆ ಕರೆ ನೀಡಿದರು.