ಬ್ರಿಟನ್, ಡಿ.08 (DaijiworldNews/MB) : ಫೈಜರ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ ಬಳಿಕ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬ್ರಿಟನ್ನ 90 ವರ್ಷದ ವೃದ್ದೆ ಮಾರ್ಗರೆಟ್ ಕೀನನ್ ಪಾತ್ರರಾಗಿದ್ದಾರೆ.
ತಾನು 91 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲು ಇನ್ನು ಒಂದು ವಾರವಿರುವಷ್ಟರಲ್ಲಿ ಕೀನನ್ ಇಂಗ್ಲೆಂಡ್ನ ಕೊವೆಂಟ್ರಿಯಲ್ಲಿರುವ ಸ್ಥಳೀಯ ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಸ್ವೀಕರಿಸಿದರು.
ಫೈಜರ್ ಸಂಸ್ಥೆಯು ಬಯೋಎನ್ಟೆಕ್ ಸಂಸ್ಥೆಯ ಸಹಕಾರದಲ್ಲಿ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯನ್ನು ಬಳಸಲು ಅನುಮೋದನೆ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಈಗಾಗಲೇ ಬ್ರಿಟನ್ ಪಾತ್ರವಾಗಿದೆ. ಈಗ ಬ್ರಿಟಿಷ್ ಮಹಿಳೆ ವಿಶ್ವದ ಮೊದಲ ಕೊರೊನಾ ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನು ಫೈಜರ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ ಬೆನ್ನಲ್ಲೇ ಫೈಜರ್ ಲಸಿಕೆಯನ್ನು ಬಳಸಲು ಬಹರೇನ್ ಸಮ್ಮತಿಸಿದೆ. ಹಾಗೆಯೇ ಈ ಸಂಸ್ಥೆಯು ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಭಾರತಕ್ಕೂ ಮನವಿ ಮಾಡಿದೆ.
ಬ್ರಿಟನ್ನಲ್ಲಿ ಮಂಗಳವಾರದಿಂದ ಈ ಲಸಿಕೆಯನ್ನು ಹಾಕಲು ಆರಂಭಿಸಿದ್ದು ಕೊರೊನಾ ತಡೆಯ ಭರವಸೆಯನ್ನು ಈ ಲಸಿಕೆ ನೀಡಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಕೀನನ್, ಕೊರೊನಾ ಲಸಿಕೆ ಹಾಕಿಸಿಕೊಂಡ ಮೊದಲ ವ್ಯಕ್ತಿಯಾಗಿರುವುದಲಕ್ಕೆ ನಾನು ತುಂಬಾ ಸಂತೋಷ ಹೊಂದಿದ್ದೇನೆ ಎಂದಿದ್ದಾರೆ.
"ಇದು ನಾನು ಹುಟ್ಟುಹಬ್ಬದ ಉಡುಗೊರೆಯಾಗಿದೆ. ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೊಸ ವರ್ಷದಲ್ಲಿ ಸಮಯವನ್ನು ಕಳೆಯಲು ನಾನು ಸನ್ನದ್ಧಳಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.