ವಾಷಿಂಗ್ಟನ್, ಡಿ.10 (DaijiworldNews/PY): ನವೆಂಬರ್ನಲ್ಲಿ ನಡೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ವಿರುದ್ದ ಡೊನಾಲ್ಡ್ ಟ್ರಂಪ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟಗೊಂಡಂದಿನಿಂದಲೂ ಟ್ರಂಪ್ ಅವರು ಮತದಾನದಲ್ಲಿ ಮೋಸವಾಗಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ, ಮತದಾನದಲ್ಲಿ ಮೋಸ ಆಗಿರುವುದಕ್ಕೆ ಯಾವುದೇ ಸೂಕ್ತವಾದ ಆಧಾರವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸುಪ್ರೀಂ ಕೋರ್ಟ್ನಲ್ಲಿ ಟೆಕ್ಸಾಸ್ ಅಟಾನಿ ಜನರಲ್ ಕೆನ್ ಪಾಕ್ಸ್ಟನ್ ಅವರು, ಜಾರ್ಜಿಯಾ, ಮಿಚಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ನಲ್ಲಿನ ಒಟ್ಟು 62 ಚುನಾವಣಾ ಕಾಲೇಜು ಮತಗಳನ್ನು ಅಮಾನ್ಯಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ನಮ್ಮ ದೇಶವನ್ನು ನಾವು ರಕ್ಷಿಸುತ್ತೇವೆ. ನನ್ನ ಎದುರಾಳಿಗಿಂತ ನಾನು ಎಲ್ಲಾ ಪ್ರಮುಖ ಕ್ಷೇತ್ರಗಳ್ಲಿ ನಡೆದ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದೇನೆ. ಈ ಎಲ್ಲಾ ದತ್ತಾಂಶಗಳನ್ನು ನೋಡಿದ ಬಳಿಕವೂ ಈ ಚುನಾವಣೆಯಲ್ಲಿ ನಾನು ಸೋಲಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು, ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾ ಚುನಾವಣೆ ಫಲಿತಾಂಶದ ವಿರುದ್ದ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ಟ್ರಂಪ್ ಅವರ ಚುನಾವಣಾ ತಂಡ ತಿಳಿಸಿದೆ.