ನ್ಯೂಯಾರ್ಕ್, ಡಿ.11 (DaijiworldNews/PY): ಟೈಮ್ ನಿಯತಕಾಲಿಕೆ ನೀಡುವ ‘2020ರ ವರ್ಷದ ವ್ಯಕ್ತಿ’ ಗೌರವಕ್ಕೆ ಅಮೇರಿಕಾದ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಹಾಗೂ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪಾತ್ರರಾಗಿದ್ದಾರೆ.
ಜನರ ಮನಸ್ಸನ್ನು ಒಡೆಯುವ ವಿಭಜಕ ಶಕ್ತಿಗಳಿಂದ ಸಹಾನುಭೂತಿಯುಳ್ಳ ಶಕ್ತಿಗಳೇ ಮೇಲು ಎಂದು ತೋರಿಸಿಕೊಟ್ಟಿರುವ ಈ ನಾಯಕರು, ಜಗದ ನೋವನ್ನು ಶಮನ ಮಾಡುವ ವಿಶ್ವಾಸವನ್ನು ಮೂಡಿಸಿದ್ದಾರೆ ಎಂದು ನಿಯತಕಾಲಿಕೆ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಕಳೆದ ನಾಲ್ಕು ವರ್ಷಗಳ ಕಾಲ ವಿಭಜಕ ಶಕ್ತಿ ಎಂದೆನಿಸಿಕೊಂಡಿದ್ದರು. ಈಗ ಜೊ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅವರು ದೇಶದ ಜನರು ಏನನ್ನು ಇಚ್ಛಿಸಿದ್ದರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನಿಯತಕಾಲಿಕೆ ಹೇಳಿದೆ.
ಕಾನ್ಫರೆನ್ಸಿಂಗ್ ಪ್ಲಾಟ್ಫಾರ್ಮ್ನ ಸಿಇಒ ಜೂಮ್ ಎರಿಕ್ ಯುವಾನ್ ಅವರನ್ನು ಟೈಮ್ನ ವರ್ಷದ ಉದ್ಯಮಿ ಎಂದು ಹೆಸರಿಸಲಾಗಿದೆ. ಡಾ.ಫೌಸಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ‘2020 ಗಾರ್ಡಿಯನ್ಸ್ ಆಫ್ ದಿ ಇಯರ್’ ಎಂದು ಗುರುತಿಸಲಾಗಿದೆ.
ಇನ್ನು ವರ್ಷದ ಮನರಂಜನಾ ಸಂಸ್ಥೆಯಾಗಿ ದಕ್ಷಿಣ ಕೊರಿಯಾದ ವಾದ್ಯಗೋಷ್ಠಿ ತಂಡ ಬಿಟಿಎಸ್, ವರ್ಷದ ಅಥ್ಲೀಟ್ ಎಂದು ಅಮೇರಿಕಾದ ಬ್ಯಾಸ್ಕೆಟ್ಬಾಲ್ ಆಟಗಾರ ಲಿ ಬ್ರಾನ್ ಜೇಮ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.