ನ್ಯೂಯಾರ್ಕ್, ಡಿ.14 (DaijiworldNews/MB) : ನವೆಂಬರ್ನಲ್ಲಿ ನಡೆದ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಸೋತರೂ ಕೂಡಾ ತಮ್ಮ ಸೋಲನ್ನು ಒಪ್ಪಿಕೊಳ್ಳದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ''ಚುನಾವಣಾ ಸವಾಲು ಇನ್ನೂ ಅಂತ್ಯವಾಗಿಲ್ಲ, ನಾವು ಮುಂದುವರಿಯುತ್ತೇವೆ'' ಎಂದು ಹೇಳಿದ್ದಾರೆ.
ಅವರು ರವಿವಾರ ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿ, ''ನಮ್ಮ ಸೋಲನ್ನು ಪ್ರಶ್ನಿಸುವ ಸವಾಲು ಇನ್ನೂ ಮುಗಿದಿಲ್ಲ ನಾವು ಮುಂದುವರಿಯುತ್ತೇವೆ. ಅಕ್ರಮವಾಗಿ ಮತ ಚಲಾವಣೆ ಮಾಡಲಾಗಿದೆ. ಹಾಗಾಗಿ ನಾವು ಈ ಚುನಾವಣೆಯನ್ನು ಪ್ರತಿಭಟಿಸುತ್ತಿದ್ದೇವೆ'' ಎಂದು ಹೇಳಿದ್ದಾರೆ.
ಟ್ರಂಪ್ ಜೊ ಬಿಡೆನ್ ಜಯ ಸಾಧಿಸಿದ ಪ್ರಮುಖ ರಾಜ್ಯಗಳ ಚುನಾವಣಾ ಫಲಿತಾಂಶ ರದ್ದತಿಗೆ ಕೋರಿ ಅಮೇರಿಕಾ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ''ಜೊ ಬಿಡೆನ್ ಗೆಲುವು ಸಾಧಿಸಿದ ರಾಜ್ಯಗಳಲ್ಲಿ ಹಲವು ಮಂದಿ ಅಕ್ರಮವಾಗಿ ಮತ ಹಾಕಿದ್ದಾರೆ. ನಕಲಿ ಮತಪತ್ರಗಳಿಂದ ಮತಪೆಟ್ಟಿಗೆಯನ್ನು ತುಂಬಿಸಲಾಗಿದೆ. ಈ ಮತಗಳನ್ನು ನಾವು ಕಾನೂನುಬದ್ದವಾಗಿ ಸ್ವೀಕರಿಸಲು ಸಾಧ್ಯವಿಲ್ಲ'' ಎಂದಿದ್ದಾರೆ.