ವಾಷಿಂಗ್ಟನ್, ಡಿ.15 (DaijiworldNews/MB) : ಗಾಯಗಳನ್ನು ಮರೆತು ನಾವೆಲ್ಲರೂ ಒಗ್ಗಟ್ಟಾಗಿ ಹೊಸ ಆರಂಭಕ್ಕೆ ಸಜ್ಜಾಗೋಣ ಎಂದು ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅಧಕ್ಷ ಜೊ ಬಿಡೆನ್ ಹೇಳಿದರು.
ಎಲೆಕ್ಟೋರಲ್ ಕಾಲೇಜ್ ಡೊನಾಲ್ಡ್ ಟ್ರಂಪ್ ವಿರುದ್ದ ಬಿಡೆನ್ ಗೆಲುವು ಸಾಧಿಸಿದ್ದನ್ನು ಖಾತರಿಪಡಿಸಿದ ಬಳಿಕ ತಮ್ಮ ತವರು ವಿಲ್ಮಿಂಗ್ಟನ್ನಲ್ಲಿ ಮಾತನಾಡಿದ ಬಿಡೆನ್, ''ಅಮೇರಿಕಾದ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನ ನಡೆದಿದ್ದು ಅಷ್ಟೇ ಅಲ್ಲದೆ ಬೆದರಿಸುವ ತಂತ್ರವು ಕೂಡಾ ನಡೆದಿದೆ'' ಎಂದು ಹೇಳಿದರು.
''ಆದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲಾ ಒತ್ತಡಗಳನ್ನು ಎದುರಿಸಿ ಮೇಲಕ್ಕೆದಿತು. ತಾನು ಬಲಿಷ್ಠವಾಗಿದ್ದೇನೆ ಎಂಬುದನ್ನೂ ಸಾಬೀತುಪಡಿಸಿದೆ. ಟ್ರಂಪ್ ಜನರು ನೀಡಿದ ತೀರ್ಪನ್ನೆ ರದ್ದು ಮಾಡುವ ಯತ್ನಕ್ಕೆ ಕೈ ಹಾಕಿದರು. ಆದರೆ ನಮ್ಮ ಸಂವಿಧಾನ ಅದಕ್ಕೆ ಆಸ್ಪದ ನೀಡದೆ, ಜನರ ತೀರ್ಪು ಗೆಲ್ಲುವಂತೆ ಮಾಡಿದೆ'' ಎಂದರು.
ಎಲೆಕ್ಟೋರಲ್ ಕಾಲೇಜ್ನ ಒಟ್ಟು ಸದಸ್ಯರ ಸಂಖ್ಯೆ 538 ಆಗಿದ್ದು ಬಿಡೆನ್ ಅವರು ಗೆಲುವು ಸಾಧಿಸಲು ಬೇಕಾದ 270 ಮತಗಳಿಗಿಂತ ಅಧಿಕ ಮತವನ್ನು ಪಡೆಯುವ ಮೂಲಕ ಶ್ವೇತಭವನ ಪ್ರವೇಶಿಸಲು ಅರ್ಹತೆಯನ್ನು ಬಿಡೆನ್ ಪಡೆದಿದ್ದಾರೆ. ಆದರೆ ಟ್ರಂಪ್ ತಮ್ಮ ಸೋಲನ್ನು ಒಪ್ಪಲು ಹಿಂಜರಿದಿದ್ದು ಬಿಡೆನ್ ಆಯ್ಕೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.