ಬ್ರೆಸಿಲಿಯಾ, ಡಿ.19 (DaijiworldNews/MB) : ''ಕೊರೊನಾ ಸೋಂಕು ತಡೆಯಲು ಫೈಜರ್ ಮತ್ತು ಬಯೋಎನ್ಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯು ಜನರನ್ನು ಮೊಸಳೆಯನ್ನಾಗಿ ಮತ್ತು ಗಡ್ಡವಿರುವ ಮಹಿಳೆಯನ್ನಾಗಿ ಪರಿವರ್ತನೆ ಮಾಡಬಹುದು'' ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಆರೋಪಿಸಿದ್ದಾರೆ.
ಬಲಪಂಥೀಯ ನಾಯಕ ಬೋಲ್ಸನಾರೊ ಈ ವಾರ ದೇಶದ ಸಾಮೂಹಿಕ ಲಸಿಕೆ ಹಾಕಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವಾಗ ತಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಕಳೆದ ವರ್ಷ ಕೊರೊನಾ ಹರಡಲು ಆರಂಭವಾದ ಸಂದರ್ಭದಿಂದಲೂ ಲಸಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಈ ಹಿಂದೆ ಕೊರೊನಾವನ್ನು ಸಣ್ಣ ಜ್ವರವಷ್ಟೇ ಎಂದೇ ಹೇಳಿದ್ದ ಅವರು, ಈಗ ಲಸಿಕೆಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ''ಫೈಜರ್ ಲಸಿಕೆಯ ಒಪ್ಪಂದದಲ್ಲಿಯೂ ಈ ವಿಚಾರವಿದೆ. ಯಾವುದೇ ಅಡ್ಡ ಪರಿಣಾಮವಾದರೆ ಅದಕ್ಕೆ ನಾವು ಜವಾಬ್ದಾರರಲ್ಲ. ನೀವು ಮೊಸಳೆಯಾಗಿ ಪರಿವರ್ತನೆಯಾದರೆ ಅದು ನಿಮ್ಮದೇ ಸಮಸ್ಯೆ ಎಂದು ಒಪ್ಪಂದದಲ್ಲಿ ಇದೆ'' ಎಂದು ಬೋಲ್ಸನಾರೊ ತಿಳಿಸಿದ್ದಾರೆ.
''ನೀವು ಅತಿಮಾನುಷರಾದರೆ, ಮಹಿಳೆಯರಿಗೆ ಗಡ್ಡ ಬಂದರೆ, ಪುರುಷನಿಗೆ ಸ್ತ್ರೀ ಧ್ವನಿ ಬಂದರೆ ಲಸಿಕೆ ಉತ್ಪಾದನೆ ಮಾಡಿದವರಿಗೂ ಇದಕ್ಕೂ ಯಾವುದೇ ಸಂಬಂಧವಿರಲ್ಲ'' ಎಂದು ಬೋಲ್ಸನಾರೊ ಟೀಕಿಸಿದ್ದಾರೆ.
ಈ ಲಸಿಕೆಯ ಬಳಕೆಗೆ ಮೊದಲು ಬ್ರಿಟನ್, ಬಳಿಕ ಬಹರೇನ್, ಅಮೇರಿಕಾ ಒಪ್ಪಿಗೆ ನೀಡಿದೆ. ಬ್ರಿಟನ್ನಲ್ಲಿ ಈಗಾಗಲೇ ಲಸಿಕೆ ಬಳಕೆಗೆ ಚಾಲನೆ ನೀಡಲಾಗಿದೆ. ಇನ್ನು ಈ ಪೈಜರ್ ಕಂಪನಿಯು ತನ್ನ ಲಸಿಕೆಯ ತುರ್ತು ಬಳಕೆಗೆ ಭಾರತದ ಸಮ್ಮತಿಯೂ ಕೋರಿದೆ.
ಏತನ್ಮಧ್ಯೆ ಜನರ ಮೇಲೆ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಬಾರದು. ಆದರೂ ಲಸಿಕೆ ನೀಡಿಕೆ ಕಡ್ಡಾಯ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಹೇಳಿದೆ.