ಅಬುಧಾಬಿ, ಡಿ.19 (DaijiworldNews/HR): ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಲು ಭಾರತ ಯೋಜನೆ ರೂಪಿಸುತ್ತಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, "ಭಾರತವು ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದು,ಪಾಕಿಸ್ತಾನದಲ್ಲಿ ಪ್ರಾಯೋಜಿತ ಭಯೋತ್ಪಾದನೆಯನ್ನು ಹುಟ್ಟು ಹಾಕಲು ಭಾರತ ಸಿದ್ದತೆ ನಡೆಸಿದೆ ಎಂದು ನಮ್ಮ ಗುಪ್ತಚರ ಇಲಾಖೆಯಿಂದ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿದೆ" ಎಂದರು.
ಇನ್ನು "ಕಾಶ್ಮೀರದ ಸಮಸ್ಯೆ, ರೈತರ ಪ್ರತಿಭಟನೆ, ಕೊರೊನಾದಂತಹ ಸಂಕಷ್ಟಗಳನ್ನು ಭಾರತವು ನಿಭಾಯಿಸಬೇಕಿದೆ. ಇವೆಲ್ಲವುಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ನವದೆಹಲಿಯಲ್ಲಿ ಯೋಜನೆಯೊಂದು ರೂಪಗೊಳ್ಳುತ್ತಿದ್ದು, ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸುವುದೇ ಆ ಯೋಜನೆಯ ಉದ್ದೇಶವಾಗಿದೆ" ಎಂದು ಹೇಳಿದ್ದಾರೆ.