ಇಸ್ರೇಲ್, ಡಿ.20 (DaijiworldNews/MB) : ಟೆಲ್ ಅವಿವ್ ಸಮೀಪದ ರಮಾತ್ ಗಾನ್ನಲ್ಲಿರುವ ಶೇಬಾ ವೈದ್ಯಕೀಯ ಕೇಂದ್ರದಲ್ಲಿ ಇಸ್ರೇಲ್ನ ಪ್ರಧಾನ ಮಂತ್ರಿ 71 ವರ್ಷ ಪ್ರಾಯದ ಬೆಂಜಮಿನ್ ನೆತನ್ಯಾಹು ಫೈಜರ್ ಕೊರೊನಾ ಲಸಿಕೆ ಹಾಕಿಸಿಕೊಂಡು ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಹಾಗೆಯೇ ಈ ಸಂದರ್ಭ ಇಸ್ರೇಲ್ನ ಆರೋಗ್ಯ ಸಚಿವ ಯುಲಿ ಎಡೆಲ್ಸ್ಟೀನ್ ಕೂಡಾ ಪೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮ ಟಿವಿ ಚಾನೆಲ್ನಲ್ಲಿ ನೇರ ಪ್ರಸಾರವಾಗಿದ್ದು ನೇರ ಪ್ರಸಾರದಲ್ಲು ಮಾತನಾಡಿದ ನೆತನ್ಯಾಹು, ''ಆರೋಗ್ಯ ಸಚಿವರೊಂದಿಗೆ ನಾನು ಲಸಿಕೆ ಹಾಕಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಲು ವೈಯಕ್ತಿಕ ಉದಾಹರಣೆ ನೀಡಿದ್ದೇನೆ, ಈ ಮೂಲಕ ನಿಮ್ಮನ್ನು ಪ್ರೋತ್ಸಾಹಿಸುತ್ತಿದ್ದೇನೆ. ಈ ಸೋಂಕಿನ ವಿರುದ್ದದ ಹೋರಾಟಕ್ಕಾಗಿ ಮೂರು ವಾರದಲ್ಲಿ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ'' ಎಂದು ಹೇಳಿದ್ದಾರೆ.
ಇನ್ನು ಡಿಸೆಂಬರ್ 8ರಂದು ಬ್ರಿಟನ್ ಫೈಜರ್ ಕೊರೊನಾ ಲಸಿಕೆಯ ಸಾರ್ವಜನರಿಕರ ಬಳಕೆ ಆರಂಭಿಸಿದೆ. ಬಳಿಕ ಅಮೇರಿಕಾ, ಕೆನಡಾ ಹಾಗೂ ಸ್ವಿಡ್ಜರ್ಲ್ಯಾಂಡ್ ಸಹ ಲಸಿಕೆಯನ್ನು ಬಳಸುತ್ತಿದೆ. ಸೋಮವಾರ ಅಮೇರಿಕಾ ಅಧ್ಯಕ್ಷ ಜೊ ಬಿಡೆನ್ ಲಸಿಕೆಯ ಮೊದಲ ಡೋಸ್ ಪಡೆಯಲಿದ್ದಾರೆ. ಹಾಗೆಯೇ ಪೈಜರ್ ಸಂಸ್ಥೆಯು ತನ್ನ ಲಸಿಕೆಯ ತುರ್ತು ಬಳಕೆಗೆ ಭಾರತದ ಅನುಮತಿ ಕೋರಿದೆ.
ಈ ನಡುವೆ ''ಕೊರೊನಾ ಸೋಂಕು ತಡೆಯಲು ಫೈಜರ್ ಮತ್ತು ಬಯೋಎನ್ಟೆಕ್ ಅಭಿವೃದ್ಧಿಪಡಿಸಿದ ಲಸಿಕೆಯು ಜನರನ್ನು ಮೊಸಳೆಯನ್ನಾಗಿ ಮತ್ತು ಮಹಿಳೆಯನ್ನು ಗಡ್ಡಧಾರಿಯಾಗಿ ಪರಿವರ್ತಿಸಬಹುದು'' ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಆರೋಪಿಸಿದ್ದಾರೆ.