ಜೆರುಸಲೆಮ್, ಡಿ.23 (DaijiworldNews/PY): ಇಸ್ರೇಲ್ ಸರ್ಕಾರ ಮಂಗಳವಾರ ಪತನಗೊಂಡಿದ್ದು, ದೇಶಲ್ಲಿ ಇದೀಗ ಮತ್ತೊಮ್ಮೆ ಅವಧಿಗೂ ಮೊದಲೇ ಚುನಾವಣೆ ಎದುರಾಗಿದೆ. ಇಸ್ರೇಲ್ನಲ್ಲಿ ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಚುನಾವಣೆ ನಡೆಯುತ್ತಿದೆ.
ಇಸ್ರೇಲ್ ಸಂಸತ್ತು ಮಂಗಳವಾರ ಮಧ್ಯರಾತ್ರಿ ತಾನಾಗಿಯೆ ವಿಸರ್ಜನೆಗೊಂಡಿತು. ಏಳು ತಿಳಗಳ ಹಿಂದೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರತಿಸ್ಪರ್ಧಿ ಬೆನ್ನಿ ಗಾಂಟ್ಜ್ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿದ್ದರು.
ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಾರ್ಟಿ ಹಾಗೂ ಬೆನ್ನಿ ಗಾಂಟ್ಜ್ ಅವರ ಬ್ಲೂ ಆ್ಯಂಡ್ ವೈಟ್ ಪಾರ್ಟಿ ಮೃತ್ರಿ ಸರ್ಕಾರವು ಉಭಯ ಪಕ್ಷಗಳ ಕಿತ್ತಾಟದ ಕಾರಣದಿಂದ ಪತನವಾಗಿದೆ. ಮಾರ್ಚ್ 23ರಂದು ಮತದಾನ ನಿಗದಿಯಾಗಿದೆ.
ಪ್ರಸ್ತುತ ಸಮಯದಲ್ಲಿ ಈ ಅನಗತ್ಯ ಚುನಾವಣೆಯನ್ನು ತಪ್ಪಿಸುವ ಸಲುವಾಗಿ ನಾವೆಲ್ಲರೂ ಕೂಡಾ ಒಗ್ಗಟ್ಟಾಗಿ ಮಾರ್ಗವನ್ನು ಕಂಡುಕೊಳ್ಳುವುದು ಮುಖ್ಯ ಎಂದು ನೆತನ್ಯಾಹು ಹೇಳಿದ್ದಾರೆ.
2020ರ ಬಜೆಟ್ ಅನ್ನು ಅನುಮೋದಿಸಲು ಕಾನೂನುಬದ್ದ ಗಡುವನ್ನು ಪೂರೈಸಲು ವಿಫಲವಾದ ನಂತರ ಸಂಸತ್ತು ಸ್ವಯಂಚಾಲಿತವಾಗಿ ವಿಸರ್ಜನೆಗೊಂಡಿದೆ. ನೆತನ್ಯಾಹು ಪಕ್ಷ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿತ್ತು. ಆದರೆ, ಬಜೆಟ್ ಮಂಡನೆ ಮಾಡಲು ನಿರಾಕರಿಸಿತ್ತು. ಗಾಂಟ್ಜ್ ಪಕ್ಷದ ಜೊತೆಗಿನ ಮೈತ್ರಿ ಒಪ್ಪಂದವನ್ನು ಉಲ್ಲಂಘನೆ ಮಾಡಿದ ಕಾರಣ ಸರ್ಕಾರದ ಪತನಕ್ಕೆ ಕಾರಣವಾಗಿದೆ ಎಂದು ಮೇಲ್ಮೋಟಕ್ಕೆ ಕಂಡುಬರುತ್ತಿದೆ.
ಚುನಾವಣೆ ಪ್ರಕ್ರಿಯೆಗಳು ಮುಗಿದು ನೂತನ ಸರ್ಕಾರ ರಚನೆ ಆಗುವವರೆಗೂ ದೇಶವನ್ನು ಇದೇ ಸರ್ಕಾರ ಮುನ್ನಡೆಸಲಿದೆ.