ನ್ಯೂಯಾರ್ಕ್, ಡಿ.23 (DaijiworldNews/PY): ಅಮೇರಿಕಾದ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಅವರು ತಮ್ಮ ಆಡಳಿತದಲ್ಲಿ ಇನ್ನೂ ಇಬ್ಬರು ಭಾರತೀಯ ಮೂಲದ ಅಮೇರಿಕನ್ನರನ್ನು ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಿದ್ದಾರೆ.
ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರನ್ನಾಗಿ ಭಾರತದಲ್ಲಿ ಜನಿಸಿದ ಗೌತಮ್ ರಾಘವನ್ ಹಾಗೂ ಭಾಷಣ ಬರವಣಿಗೆಯ ನಿರ್ದೇಶಕರನ್ನಾಗಿ ಭಾರತೀಯ ಮೂಲದ ಅಮೇರಿಕನ್ ಪ್ರಜೆ ವಿನಯ್ ರೆಡ್ಡಿ ಅವರನ್ನು ಜೊ ಬಿಡೆನ್ ಅವರು ಆಯ್ಕೆ ಮಾಡಿದ್ದಾರೆ.
ರಾಘವನ್ ಅವರು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೂ ಕೂಡಾ ಕಾರ್ಯ ನಿರ್ವಹಿಸಿದ್ದರು.
ಜೊ ಬಿಡೆನ್ ಅವರು ಉಪಾದ್ಯಕ್ಷರಾಗಿದ್ದಾಗಿನಿಂದ ಹಾಗೂ ಪ್ರಚಾರ ಸಿಬ್ಬಂದಿ ವರ್ಗದಲ್ಲಿದ್ದ ವಿನಯ್ ರೆಡ್ಡಿ ಅವರು, ಅಧ್ಯಕ್ಷರೊಂದಿಗೆ ಭಾಷಣ ಬರಹಗಾರರ ತಂಡದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
"ನಮ್ಮ ರಾಷ್ಟ್ರವನ್ನು ಈ ಅನುಭವಿ ವ್ಯಕ್ತಿಗಳು ಹಿಂದಿಗಿಂತಲೂ ಉತ್ತಮವಾಗಿ ನಿರ್ಮಿಸುವ ಹಾದಿಯಲ್ಲಿ ನೀತಿಗಳನ್ನು ಕೈಗೊಳ್ಳಲು ನಮ್ಮ ಆಡಳಿತಕ್ಕೆ ಸೇರ್ಪಡೆಯಾಗುತ್ತಿದ್ದಾರೆ" ಎಂದು ಜೊ ಬಿಡೆನ್ ತಿಳಿಸಿದ್ದಾರೆ.