ಇಸ್ಲಾಮಾಬಾದ್, ಡಿ.23 (DaijiworldNews/PY): ಭಾರತೀಯ ಸೇನೆಯ ಗಡಿ ನಿಯಂತ್ರಣ ರೇಖೆಯ ಬಳಿ ಕದನ ವಿರಾಮ ಉಲ್ಲಂಘಿಸಿದೆ ಎಂಬ ಆರೋಪದಡಿ ಬುಧವಾರ ಪಾಕಿಸ್ತಾನವು ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆದು ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
"ಮಂಗಳವಾರ ಭಾರತೀಯ ಸೇನೆಯು ಹಾಟ್ಸ್ಪ್ರಿಂಗ್ ಹಾಗೂ ಜಾಂಡ್ರೊಡ್ ವಲಯಗಳಲ್ಲಿ ನಡೆಸಿದ್ದ ಗುಂಡಿನ ದಾಳಿಯಲ್ಲಿ 50 ವರ್ಷದ ನಾಗರಿಕ ಮೃತಪಟ್ಟಿದ್ದು, ನಾಲ್ಕು ವರ್ಷದ ಮಗು ಸೇರಿ ಮೂರು ಮಂದಿಗೆ ಗಾಯಗಳಾಗಿವೆ" ಎಂದು ಪಾಕ್ನ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
"2003ರ ಕದನ ವಿರಾಮ ಉಲ್ಲಂಘನೆ ನೀತಿಯನ್ನು ಗೌರವಿಸುವ, ಗಡಿಯಲ್ಲಿ ಶಾಂತಿ ಕಾಪಾಡುವ ವಿಚಾರದ ಬಗ್ಗೆ ಚರ್ಚೆ ನಡೆಸಲು ಹಾಗೂ ಕದನ ವಿರಾಮ ಉಲ್ಲಂಘನೆಯ ಘಟನೆಗಳ ಬಗ್ಗೆ ತನಿಖೆ ನಡೆಸಲು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿತ್ತು" ಎಂದು ಪಾಕ್ ಹೇಳಿದೆ.