ವಾಷಿಂಗ್ಟನ್, ಡಿ.24 (DaijiworldNews/PY): ವಾರ್ಷಿಕ ರಕ್ಷಣಾ ಮಸೂದೆಯ ಕೆಲ ಅಂಶಗಳು ರಾಷ್ಟ್ರದ ಭದ್ರತೆಗೆ ಅಪಾಯವಾಗಲಿದೆ ಎನ್ನುವ ಕಾರಣ ನೀಡಿ ಡೊನಾಲ್ಡ್ ಟ್ರಂಪ್ ಅವರು ಮಸೂದೆಯನ್ನು ತಿರಸ್ಕರಿಸಿದ್ದಾರೆ.
ಟ್ರಂಪ್ ಅವರು ಈ ಮಸೂದೆಯನ್ನು ತಿರಸ್ಕರಿಸಿದ್ದರೂ ಕೂಡ ಸಂಸತ್ನ ಉಭಯ ಸದನಗಳು ಮಸೂದೆಗೆ ಅನುಮೋದನೆ ನೀಡಲು ಮುಂದಾಗಿವೆ.
ಸಂಸತ್ನ ಕೆಳಮನೆ 54.53 ಲಕ್ಷ ಕೋಟಿ ಗಾತ್ರದ ನ್ಯಾಷನಲ್ ಡಿಫೆನ್ಸ್ ಆಥರೈಜೇಶನ್ ಆ್ಯಕ್ಟ್ಗೆ 335–78 ಮತಗಳಿಂದ ಅನುಮೋದನೆ ನೀಡಿದ್ದು, ಈ ವಾರ್ಷಿಕ ರಕ್ಷಣಾ ಮಸೂದೆಗೆ ಸೆನೆಟ್ 84–13 ಮತಗಳಿಂದ ಅನುಮೋದನೆ ನೀಡಿತ್ತು.
ವಾರ್ಷಿಕ ರಕ್ಷಣಾ ಮಸೂದೆಯನ್ನು ಟ್ರಂಪ್ ಅವರು ತಿರಸ್ಕಾರ ಮಾಡಿದ ಹಿನ್ನೆಲೆ ಹಿರಿಯ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅವರ ಈ ನಡೆಯ ಬಗ್ಗೆ ಕೆಲಮನೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದು, "ಈ ವಿಚಾರವಾಗಿ ಟ್ರಂಪ್ ಅವರು ಅವಸರದ ತೀರ್ಮಾನ ಕೈಗೊಂಡಿದ್ದಾರೆ" ಎಂದಿದ್ದಾರೆ.
"ಅಧಿವೇಶನವು ಡಿ.28ರಂದು ನಡೆಯಲಿದೆ. ಪಕ್ಷಬೇಧವನ್ನು ಮರೆತು ವಾರ್ಷಿಕ ರಕ್ಷಣಾ ಮಸೂದೆಯನ್ನು ಅಂಗೀಕಾರ ಮಾಡಲಾಗುವುದು" ಎಂದು ತಿಳಿಸಿದ್ದಾರೆ.