ವಾಷಿಂಗ್ಟನ್, ಡಿ.25 (DaijiworldNews/PY): "ಭಾರತ ಹಾಗೂ ಅಮೇರಿಕಾದ ಬಾಂಧವ್ಯ ಇನ್ನಷ್ಟು ವಿಸ್ತರಿಸಲು 2021ರಲ್ಲಿ ಅವಕಾಶಗಳು ಸಿಗಲಿವೆ" ಎಂದು ಅಮೆರಿಕ ಭಾರತ ವ್ಯವಹಾರಗಳ ಮಂಡಳಿ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಅಮೇರಿಕಾ ಹಾಗೂ ಭಾರತದ ನಡುವೆ ಅಮೇರಿಕಾದ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಅವರ ಆಡಳಿತದ ಮುಖ್ಯ ಕಾರ್ಯಸೂಚಿಯಲ್ಲಿ ಸಣ್ಣ ವ್ಯಾಪಾರಗಳ ಒಪ್ಪಂದಕ್ಕೆ ಪ್ರಾಶಸ್ತ್ಯವಿರಬೇಕು" ಎಂದಿದ್ದಾರೆ.
"ಭಾರತ-ಅಮೇರಿಕಾದ ನಡುವೆ ಮುಂಬರುವ ವರ್ಷದಲ್ಲಿಯೂ ಕೂಡಾ ಬಾಂಧವ್ಯ ಇನ್ನುಷ್ಟು ಸದೃಢವಾಗಿ ಮುಂದುವರೆಯಲಿದೆ ಇದನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಅವಕಾಶಗಳು ಬರಲಿವೆ" ಎಂದು ತಿಳಿಸಿದ್ದಾರೆ.
"ಭಾರತದೊಂದಿಗೆ ಅಮೇರಿಕಾದ ಈಗಿನ ಸರ್ಕಾರ ಉತ್ತಮವಾದ ಬಾಂಧವ್ಯ ಹೊಂದಿದೆ. ಮುಂದಿನ ಸರ್ಕಾರವೂ ಕೂಡಾ ಇದೇ ರೀತಿಯಾದ ಬಾಂಧವ್ಯ ಮುಂದುವರೆಸಲಿದೆ ಎನ್ನುವ ಭರವಸೆ ನನಗಿದೆ" ಎಂದಿದ್ದಾರೆ.
"ಡೊನಾಲ್ಡ್ ಟ್ರಂಪ್ ಅವರು 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತ-ಅಮೇರಿಕಾದ ನಡುವಿನ ಸಣ್ಣ ವ್ಯಾಪಾರದ ಒಪ್ಪಂದದ ವಿಚಾರ ಇನ್ನೂ ಕೂಡಾ ಅಂತಿಮವಾಗಿಲ್ಲ. ಆದರೂ, ಕೂಡಾ ಉಭಯ ರಾಷ್ಟ್ರಗಳು ತಮ್ಮ ಕಾರ್ಯತಂತ್ರವನ್ನು ಜೊತೆಯಾಗಿ ಮುಂದುವರೆಸುವುದನ್ನು ನಾವು ಕಂಡಿದ್ದೇವೆ" ಎಂದು ತಿಳಿಸಿದ್ದಾರೆ.