ವಾಷಿಂಗ್ಟನ್, 25 (DaijiworldNews/MB) : ಭಾರತೀಯ ಅಮೇರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೇರಿಕಾದ ಏಳು ಪ್ರಭಾವಿ ಸಂಸದರ ಗುಂಪು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರಿಗೆ ಪತ್ರ ಬರೆದಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ವಿಚಾರವನ್ನು ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ.
ರೈತರ ಪ್ರತಿಭಟನೆಗೆ ಸಂಬಂಧಿಸಿ ವಿದೇಶಿ ನಾಯಕರು ಹಾಗೂ ರಾಜಕಾರಣಿಗಳ ಹೇಳಿಕೆಗಳು ಅನಪೇಕ್ಷಿತ ಹಾಗೂ ಅನಗತ್ಯವಾದದ್ದು. ಇದು ರಾಷ್ಟ್ರದ ಆತಂರಿಕ ವಿಚಾರ ಎಂದು ಭಾರತ ಹಲವು ಬಾರಿ ಪ್ರತಿಪಾದಿಸುತ್ತಲ್ಲೇ ಬಂದಿದೆ.
ಆದರೆ ಈಗ ಭಾರತೀಯ ಅಮೇರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೇರಿಕಾದ ಏಳು ಪ್ರಭಾವಿ ಸಂಸದರ ಗುಂಪು ಅಮೇರಿಕಾ ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದು, "ಇದರಿಂದಾಗಿ ಸಿಖ್ ಅಮೇರಿಕನ್ನರಿಗೆ ಸಮಸ್ಯೆ ಉಂಟಾಗಿದೆ. ಹಾಗೆಯೇ ಭಾರತರ ಇತರೆ ರಾಜ್ಯಗಳಿಗೆ ಸೇರಿದ ಭಾರತೀಯ ಅಮೇರಿಕನ್ನರಿಗೆ ಪರಿಣಾಮಬೀರುತ್ತದೆ" ಎಂದು ತಿಳಿಸಿದ್ದಾರೆ.
ಹಲವು ಭಾರತೀಯ ಅಮೇರಿಕನ್ನರು ಪಂಜಾಬ್ನಲ್ಲಿ ಕುಟುಂಬಸ್ಥರು ಹಾಗೂ ಪೂರ್ವಜರ ಭೂಮಿಯನ್ನು ಹೊಂದಿದ್ದಾರೆ. ಭಾರತದಲ್ಲಿರುವ ಅವರ ಕುಟುಂಬದ ಯೋಗ ಕ್ಷೇಮದ ವಿಚಾರವು ಅವರಿಗೆ ನೇರವಾಗಿ ಪರಿಣಾಮ ಬೀರುತ್ತಿದೆ. ಈ ಗಂಭೀರ ಸ್ಥಿತಿಯನ್ನು ಗಮನದಲ್ಲಿರಿಸಿ ಭಾರತದ ವಿದೇಶಾಂಗ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದಗೊಳಿಸುವಂತೆ ಆಗ್ರಹಿಸಿ ಕಳೆದ 30 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.