ರಿಯಾದ್, ಡಿ. 29 (DaijiworldNews/MB) : ಬೇಹುಗಾರಿಕೆ ಮಾಡಿದ ಆರೋಪ ಹೊತ್ತಿದ್ದ ಸೌದಿ ಅರೇಬಿಯಾದ ಪ್ರಮುಖ ಮಹಿಳಾ ಹೋರಾಟಗಾರ್ತಿ ಲೌಜಿಯಾನ್ ಅಲ್ಹತ್ಲೋಲು (31) ಅವರಿಗೆ ಐದು ವರ್ಷ ಎಂಟು ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸಿ ಸೌದಿ ಅರೇಬಿಯಾದ ಕೋರ್ಟ್ ತೀರ್ಪು ನೀಡಿದೆ.
ರಾಜ ಕುಟುಂಬದ ವಿರುದ್ಧ ವಿದೇಶಿಗರ ಜೊತೆ ಸೇರಿ ಬೇಹುಗಾರಿಕೆ ನಡೆಸಿದ ಆರೋಪ ಅವರ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮೂರು ವರ್ಷಗಳ ಹಿಂದೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬಾರದು ಎಂದು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಒತ್ತಾಯಿಸಿದ್ದವು. ಅಮೇರಿಕಾ ಸರ್ಕಾರವೂ ಕೂಡಾ ಪ್ರತ್ಯೇಕ ಮನವಿ ಸಲ್ಲಿಸಿತ್ತು.
ಇನ್ನು ಕೋರ್ಟ್ ಜೈಲು ಶಿಕ್ಷೆ ವಿಧಿಸಿದ ಸಂದರ್ಭ ತಾನು ನಿರಪರಾಧಿ ಎಂದು ಹೇಳಿಕೊಂಡ ಲೌಜಿಯಾನ್ ಅಲ್ಹತ್ಲೋಲು, ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಲ್ಹತ್ಲೋಲುಗೆ ಶಿಕ್ಷೆ ವಿಧಿಸಿರುವ ಪ್ರಕಟಣೆ ಹೊರಡಿಸಿರುವ ಸಹೋದರಿ ಲೀನಾ, ''ನನ್ನ ಅಕ್ಕ ಭಯೋತ್ಪಾದಕಿ ಅಲ್ಲ, ಆಕೆ ಹೋರಾಟಗಾರ್ತಿ. ಕಾನೂನು ಬದಲಾವಣೆಗಾಗಿ ಹೋರಾಡಿದವರಿಗೆ ಶಿಕ್ಷೆ ವಿಧಿಸಿ ಸರ್ಕಾರ ಬೂಟಾಟಿಕೆ ತೋರಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿ ನೀಡಬೇಕು ಎಂದು 2018ರಲ್ಲಿ ಆಗ್ರಹಿಸಿದವರಲ್ಲಿ ಲೌಜಿಯಾನ್ ಪ್ರಮುಖರಾಗಿದ್ದಾರೆ.