ಅಡೆನ್,ಡಿ.31(DaijiworldNews/HR): ಹೊಸದಾಗಿ ರಚನೆಗೊಂಡ ಸಂಪುಟದ ಸಚಿವರುಗಳಿದ್ದ ವಿಮಾನ ಬಂದಿಳಿದ ಕೂಡಲೇ ಬಾಂಬ್ ಸ್ಪೋಟವಾಗಿ 26 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಯೆಮೆನ್ನ ಅಡೆನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನದಿಂದ ಇಳಿದ ಸಚಿವರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದ್ದು, ಇರಾನ್ ಬೆಂಬಲಿತ 'ಹುತಿ' ಬಂಡುಕೋರರು ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, ಹೊಗೆ ತುಂಬಿಕೊಂಡಿತ್ತು. ರಕ್ಷಣಾ ಕಾರ್ಯಕ್ಕೆಂದು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಮತ್ತೊಂದು ಸ್ಪೋಟವಾಗಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.
ಈ ಕುರಿತು ಯೆಮನ್ನ ಪ್ರಧಾನಿ ಮೊಯೀನ್ ಅಬ್ದುಲ್ಮಲಿಕ್ ಸಯೀದ್ ಮಾತನಾಡಿ, "ಇದೊಂದು ಹೇಡಿತನ ಕೃತ್ಯವಾಗಿದ್ದು, ಸ್ಫೋಟದ ಹಿಂದಿನ ಕೈವಾಡದ ಕುರಿತು ಶೀಘ್ರ ಬಹಿರಂಗವಾಗಲಿದೆ" ಎಂದು ಹೇಳಿದ್ದಾರೆ.