ಜಿನೆವಾ, ಜ.01 (DaijiworldNews/PY): ಫೈಜರ್ ಹಾಗೂ ಬಯೋಎನ್ಟೆಕ್ನ ಕೊರೊನಾ ಲಸಿಕೆಯನ್ನು ತ್ವರಿತವಾಗಿ ಬೇರೆ ಬೇರೆ ದೇಶಗಳಲ್ಲಿ ವಿತರಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ನೀಡಿದೆ.
ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ನಂತರ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮತಿ ಪಡೆದುಕೊಂಡ ಪ್ರಥಮ ಲಸಿಕೆ ಇದಾಗಿದೆ.
ಡಿ.8ರಿಂದಲೇ ಈ ಲಸಿಕೆಯ ಬಳಕೆಗೆ ಕೆನಡಾ ಸೇರಿದಂತೆ ಇಂಗ್ಲೆಂಡ್, ಅಮೇರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಚಾಲನೆ ನೀಡಲಾಗಿದೆ.
ಡಬ್ಲ್ಯೂಎಚ್ಒನ ಉನ್ನತ ಅಧಿಕಾರಿ ಮರಿಯಾಂಜೆಲಾ ಸಿಮಾವೊ ಮಾತನಾಡಿ, "ಕೊರೊನಾ ಲಸಿಕೆಗಳ ಜಾಗತಿಕ ಬಳಕೆಗಾಗಿ ಅನುಮತಿ ನೀಡುವ ಸಲುವಾಗಿ ಇದು ಸೂಕ್ತವಾದ ತೀರ್ಮಾನವಾಗಿದೆ" ಎಂದಿದ್ದಾರೆ.
"ವಿವಿಧ ದೇಶಗಳಲ್ಲಿ ಔಷಧ ನಿಯಂತ್ರಕರಿಗೆ ಲಸಿಕೆ ಆಮದು ಹಾಗೂ ವಿತರಣೆಗೆ ಅನುಮೋದನೆ ನೀಡಲು ತನ್ನ ತುರ್ತು ಬಳಕೆಯ ಪಟ್ಟಿ ಅನುವು ಮಾಡಿಕೊಡುತ್ತದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.