ವಾಷಿಂಗ್ಟನ್, ಜ.02 (DaijiworldNews/PY): ಡೊನಾಲ್ಡ್ ಟ್ರಂಪ್ ಅವರ ವಿರೋಧ ನಡುವೆಯೂ ಅಮೇರಿಕಾ ಸಂಸತ್ತು ಭಾರತದ ಗಡಿಯಲ್ಲಿ ಚೀನಾದ ಮಿಲಿಟರಿ ಆಕ್ರಮಣವನ್ನು ವಿರೋಧಿಸುವ ಮಸೂದೆಯನ್ನು ಕಾಯ್ದೆಯನ್ನಾಗಿ ರೂಪಿಸಿದೆ.
ರಾಷ್ಟ್ರೀಯ ರಕ್ಷಣಾ ದೃಢೀಕರಣ 2021 ಮಸೂದೆಯು ಇತ್ತೀಚೆಗೆ ಸೆನೆಟ್ನಲ್ಲಿ ಅನುಮೋದನೆಗೊಂಡಿತ್ತು. ಈ ಮಸೂದೆಯನ್ನು ಜ.1 ಶುಕ್ರವಾರದಂದು ಅಮೇರಿಕಾದ ಉಭಯ ಪಕ್ಷೀಯ ಸಂಸತ್ತು ಕಾಯ್ದೆಯಾಗಿ ಅನುಷ್ಠಾನಗೊಳಿಸಿದೆ.
ಈ ಕಾಯ್ದೆ ಡೊನಾಲ್ಡ್ ಟ್ರಂಪ್ ಅವರು ವಿರೋಧ ವ್ಯಕ್ತಪಡಿಸಿದ್ದು, ಈ ಕಾಯ್ದೆಯಿಂದ ದೇಶದ ಭದ್ರತೆಗೆ ಅಪಾಯ ಉಂಟಾಗುತ್ತದೆ ಎಂದಿದ್ದರು. ಆದರೆ, ಟ್ರಂಪ್ ಅವರ ವಿರೋಧವನ್ನು ತಳ್ಳಿ ಉಭಯ ಪಕ್ಷದ ಸಂಸದರು ರಕ್ಷಣಾ ಮಸೂದೆಯನ್ನು ಕಾನೂನನ್ನಾಗಿಸುವ ಪರ ಮತಚಲಾಯಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತೀಯ-ಅಮೆರಿಕನ್ ಸಂಸತ್ ಸದಸ್ಯ ರಾಜ ಕೃಷ್ಣಮೂರ್ತಿ ಅವರು, "ಚೀನಾದ ಮಿಲಿಟರಿ ಆಕ್ರಮಣ ಕೊನೆಗೊಳಿಸುವ ನಿಟ್ಟಿನಲ್ಲಿ ಚೀನಾಕ್ಕೆ ಕರೆ ನೀಡುವುದು ಸೇರಿ ನಾನು ನೀಡಿದ್ದ ಹಲವು ರಕ್ಷಣಾ ಅಂಶಗಳನ್ನು ಒಳಗೊಂಡಂತಹ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಯನ್ನು ಸೆನೆಟ್ನಲ್ಲಿ ಹೊಸ ವರ್ಷದಂದು ಮತದಾನದ ಮುಖೇನ ಸಂಸತ್ತು ಕಾನೂನನ್ನಾಗಿ ರೂಪಿಸಿದೆ" ಎಂದಿದ್ದಾರೆ.