ರಿಯಾದ್, ಜ. 05 (DaijiworldNews/MB) : ಮೂರು ವರ್ಷಗಳ ಹಳೆಯ ವಿವಾದಕ್ಕೆ ಸೌದಿ ಅರೇಬಿಯಾ ಮತ್ತು ಕತಾರ್ ಅಂತ್ಯ ಹಾಡಿದ್ದು ತಮ್ಮ ವಾಯು ಮಾರ್ಗ ಹಾಗೂ ಜಯಮಾರ್ಗ ಗಡಿಗಳನ್ನು ಸೋಮವಾರದಿಂದ ಮತ್ತೆ ತೆರೆಯಲು ಒಪ್ಪಿಕೊಂಡಿವೆ ಎಂದು ಕುವೈತ್ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಕತಾರ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಆರೋಪ ಕೇಳಿ ಬಂದ ನಂತರ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್ ಮತ್ತು ಈಜಿಪ್ಟ್ 2017 ರಲ್ಲಿ ಕತಾರ್ ಅನ್ನು ಬಹಿಷ್ಕರಿಸಿದೆ. ಸೌದಿ ಅರೇಬಿಯಾದೊಂದಿಗೆ ತನ್ನ ಏಕೈಕ ಭೂ ಗಡಿಯನ್ನು ಹಂಚಿಕೊಂಡಿರುವ ಕತಾರ್ ಈ ಆರೋಪಗಳನ್ನು ತಿರಸ್ಕರಿಸಿದ್ದು, ಇದು ನ್ಯಾಯಸಮ್ಮತವಲ್ಲ ಮತ್ತು ಆಧಾರರಹಿತ ಎಂದು ಹೇಳಿದೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಮತ್ತು ಹಿರಿಯ ಸಲಹೆಗಾರ ಜೇರೆಡ್ ಕುಶ್ನರ್ ಅವರು ಉಭಯ ದೇಶಗಳ ನಡುವೆ ಮಾತುಕತೆಗೆ ಸಹಾಯ ಮಾಡಿದ್ದಾರೆ ಎಂದು ಯುಎಸ್ ಆಡಳಿತದ ಮೂಲಗಳು ಸೋಮವಾರ ತಿಳಿಸಿವೆ.
ಗಲ್ಫ್ ಅರಬ್ ನಾಯಕರು ಡಿಸೆಂಬರ್ 5 ರ ಮಂಗಳವಾರ ಸೌದಿ ಅರೇಬಿಯಾದಲ್ಲಿ ಗಲ್ಫ್ ಕೋಆಪರೇಷನ್ ಕೌನ್ಸಿಲ್ (ಜಿಸಿಸಿ) ವಾರ್ಷಿಕ ಶೃಂಗಸಭೆ ಸೇರುವ ನಿರೀಕ್ಷೆಯಿದೆ. ಈ ಸಂದರ್ಭ ವಿವಾದವಕ್ಕೆ ತೆರೆ ಎಳೆಯುವ ಒಪ್ಪಂದವನ್ನು ಮಾಡುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮದಲ್ಲಿ ಬಹ್ರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕತಾರಿ ಎಮಿರ್ ಸಹ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು ಮೂರು ವರ್ಷಗಳಲ್ಲಿ ಅವರು ಮೊದಲ ಬಾರಿಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ.
ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಕುವೈತ್ ವಿದೇಶಾಂಗ ಸಚಿವ ಅಹ್ಮದ್ ನಾಸರ್ ಮೊಹಮ್ಮದ್ ಅಲ್ ಸಬಾ ಹೇಳಿದ್ದಾರೆ. ಕತಾರ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಕುವೈತ್ ಮಧ್ಯಸ್ಥಿಕೆ ವಹಿಸುತ್ತಿದೆ.