ಪೋರ್ಚುಗೀಸ್, ಜ 05 (DaijiworldNews/SM): ಮಾರಕ ಕೊರೋನಾ ಸೋಂಕು ನಿಯಂತ್ರಣಕ್ಕೆ ವಿಶ್ವದೆಲ್ಲೆಡೆ ವಿವಿಧ ರೀತಿಯಲ್ಲಿ ಸಂಶೋಧನೆಗಳನ್ನು ಮಾಡಲಾಗಿದೆ. ಸದ್ಯ ಅತೀ ಅವಶ್ಯಕ ಎಂಬ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಲಾಗಿದೆ.
ತುರ್ತು ಬಳಕೆಗೆ ಅನುಮೋದನೆ ನೀಡಿದ ಬಳಿಕ ನರ್ಸ್ ವೊಬ್ಬರು ಫೈಝರ್ ಲಸಿಕೆ ತೆಗೆದುಕೊಂಡು ಎರಡು ದಿನಗಳ ನಂತರ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಪ್ರಸ್ತುತ ಈ ಘಟನೆ ಜಗತ್ತಿನಾದ್ಯಂತ ತೀವ್ರ ಚರ್ಚೆಯಾಗುತ್ತಿದೆ. ಅಲ್ಲದೆ, ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ಮತ್ತಷ್ಟು ಅನುಮಾನ, ಆತಂಕಗಳನ್ನು ಹುಟ್ಟುಹಾಕಿದೆ.
ಪೋರ್ಚುಗೀಸ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ಮಕ್ಕಳ ಸಹಾಯಕ ದಾದಿಯಾಗಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಮೃತಪಟ್ಟವರಾಗಿದ್ದಾರೆ. ಫೈಝರ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಯ ಭಾಗವಾಗಿ ಆಕೆ ಲಸಿಕೆಯನ್ನು ತೆಗೆದುಕೊಂಡಿದ್ದು, ಎರಡು ದಿನಗಳ ನಂತರ ಮೃತಪಟಿದ್ದಾರೆ.
ಸಾವಿನ ಕಾರಣ ಪತ್ತೆ ಹಚ್ಚಲು ಪೋರ್ಚುಗೀಸ್ ಆರೋಗ್ಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಪೋರ್ಚುಗಲ್ನಲ್ಲಿ 538 ಆರೋಗ್ಯ ಕಾರ್ಯಕರ್ತರಿಗೆ ಫೈಝರ್ ಲಸಿಕೆ ನೀಡಲಾಗಿದೆ ಈ ಪೈಕಿ ದಾದಿಯೊಬ್ಬರು ಮೃತಪಟ್ಟಿರುವುದು ಹಲವು ರೀತಿಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಭಾರತದಲ್ಲಿ ಭಾರತ್ ಬಯೋಟೆಕ್ ಕೊರೋನಾ ಲಸಿಕೆ ತುರ್ತು ಬಳಕೆಗೆ ಡಿಜಿಸಿಐ ಅನುಮೋದನೆ ನೀಡಿದೆ. ಆದರೆ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಸಂದೇಹಗಳಿವೆ. ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸುವಂತಹ ಘಟನೆ ಪೋರ್ಚುಗಲ್ನಲ್ಲಿ ನಡೆದಿದೆ.