ಕುವೈಟ್, ಜ. 06 (DaijiworldNews/MB) : ಕುವೈಟ್ ನ ಮಹಬೂಲದಲ್ಲಿ ಕರ್ನಾಟಕ ರಾಜ್ಯದ ಸಾಗರ ತಾಳಗೊಪ್ಪ ನಿವಾಸಿ ಹಾಶಂ ಪರೀದ್ ಸಾಬ್ ಅವರು 2020 ರ ಡಿಸೆಂಬರ್ 25 ರಂದು ಸಾವನ್ನಪ್ಪಿದ್ದು ಈ ಸಾವು ಅನುಮಾನಸ್ಪದವಾಗಿದೆ ಎಂದು ಆರೋಪಿಸಲಾಗಿದೆ.
ಮೊದಲು ಅವರು ಕೆಲಸ ಮಾಡುವ ಕಂಪನಿಯ ಅಧಿಕಾರಿಗಳು ಈಜಲು ಸಮುದ್ರಕ್ಕೆ ತೆರಳಿದಾಗ ಹಾಶಂ ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ಕಂಪನಿಯ ವಾಟ್ಸಪ್ ಗುಂಪಿಗೆ ಸಂದೇಶ ಕಳಿಸಿದ್ದು ಅದೇ ದಿನ ಕಂಪನಿಯ ಅಧಿಕಾರಿಯೊಬ್ಬರು ಕುಟುಂಬದ ಸಂಬಂಧಿಕರೊಬ್ಬರ ಮನೆಗೆ ಕರೆ ಮಾಡಿ ಹಾಶಂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಾಹಿತಿಯನ್ನು ಸಂಬಂಧಿಕರು ಕುವೈಟ್ನಲ್ಲಿರುವ ಹಾಶಂನ ಸ್ನೇಹಿತರಿಗೆ ತಿಳಿಸಿದ್ದು, ಸ್ನೇಹಿತರು ಹಾಸಂ ವಾಸವಿದ್ದ ಕೊಠಡಿಗೆ ಹೋಗಿದ್ದಾರೆ. ಆದರೆ ಈ ಸಂದರ್ಭ ಹಾಸಿಗೆಯ ಮೇಲೆ ರಕ್ತದ ಕಲೆಗಳಿರುವುದನ್ನು ಸ್ನೇಹಿತರು ಗಮನಿಸಿದ್ದು ಈ ಸಾವು ಅನುಮಾನಸ್ಪದವಾಗಿದೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಮೃತನ ಕುಟುಂಬಸ್ಥರು 2020 ರ ಡಿಸೆಂಬರ್ 28 ರಂದು ಕುವೈಟ್ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಮೃತ ಶರೀರವನ್ನು ಊರಿಗೆ ಕಳಿಸುವಂತೆ ಇಮೇಲ್ ಮೂಲಕ ಮನವಿ ಮಾಡಿದ್ದಾರೆ.
2020 ರ ಡಿಸೆಂಬರ್ 29 ರಂದು ಊರಿನಲ್ಲಿರುವ ಕುಟುಂಬಸ್ಥರು ಸ್ಥಳೀಯ ಗ್ರಾಮಾಂತರ ಪೋಲಿಸ್ ಠಾಣೆ ಸಾಗರದ ಮೂಲಕ ಶಿವಮೊಗ್ಗ ಜಿಲ್ಲಾಡಳಿತ, ಕರ್ನಾಟಕ ಸರಕಾರದ ಅಪರ ಕಾರ್ಯದರ್ಶಿಗಳು ಒಳಾಡಳಿತ ಇಲಾಖೆಗೆ (ಕಾನೂನು ಮತ್ತು ಸುವ್ಯವಸ್ಥೆ) ಮರಣದ ಬಗ್ಗೆ ಅನುಮಾನವಿದೆ ಎಂದು ತಿಳಿಸಿದ್ದು, ಕುವೈಟ್ನಲ್ಲಿಯೇ ಅದರ ತನಿಖೆ ನಡೆಸಲು ಕುವೈಟ್ನ ಭಾರತದ ರಾಯಭಾರಿ ಕಚೇರಿಗೆ ಮನವಿ ಮಾಡಲು ಪತ್ರದ ಮೂಲಕ ಕೋರಲಾಗಿದೆ.
ಹಾಗೆಯೇ 2021ರ ಜನವರಿ 4 ರಂದು ಕುಟುಂಬಸ್ಥರು ಸರಕಾರದ ಅಪರ ಕಾರ್ಯದರ್ಶಿಗಳು ಒಳಾಡಳಿತ ಇಲಾಖೆಯ (ಕಾನೂನು ಮತ್ತು ಸುವ್ಯವಸ್ಥೆ) ಕಚೇರಿಗೆ ಸ್ವತಃ ತೆರಳಿ ಮನವಿಯ ಬಗ್ಗೆ ತಿಳಿಸಿದಾಗ ಇಲಾಖೆ ಮನವಿ ತಲುಪಿಲ್ಲ ಎಂದು ಮಾಹಿತಿ ಲಭಿಸಿದೆ.
ಈ ಮನವಿ ಇಲ್ಲದೇ ಕರ್ನಾಟಕ ಸರಕಾರದಿಂದ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕರ್ನಾಟಕ ಸರಕಾರ ಮತ್ತು ಭಾರತ ಸರಕಾರದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.